ನವದೆಹಲಿ:ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡಕ್ಕೆ ಮತ್ತೊಂದು ಗಾಯದ ಬರೆ ಬಿದ್ದಿದೆ. ಬ್ಯಾಟರ್ ರಜತ್ ಪಾಟಿದಾರ್ ಅವರು ಹಿಮ್ಮಡಿ ಗಾಯದ ಕಾರಣಕ್ಕೆ 2023ರ ಐಪಿಎಲ್ನಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ. ಈ ಬಗ್ಗೆ ಮಂಗಳವಾರ ಫ್ರಾಂಚೈಸಿ ಅಧಿಕೃತ ಟ್ವಿಟರ್ ಹ್ಯಾಡಲ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಆರ್‌ಸಿಬಿ ಟ್ವಿಟರ್ನಲ್ಲಿ,"ದುರದೃಷ್ಟವಶಾತ್, ಅಕಿಲ್ಸ್ ಹೀಲ್ ಗಾಯದಿಂದಾಗಿ ರಜತ್ ಪಾಟಿದಾರ್ ಐಪಿಎಲ್ನಿಂದ ಹೊರಗುಳಿಯುತ್ತಿದ್ದಾರೆ. ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ. ಚೇತರಿಕೆಯ ಪ್ರಕ್ರಿಯೆಯ ಸಮಯದಲ್ಲಿ ಅವರಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ. ರಜತ್‌ಗೆ ಬದಲಿ ಆಟಗಾರನನ್ನು ಹೆಸರಿಸದಿರಲು ಕೋಚ್‌ಗಳು ಮತ್ತು ಆಡಳಿತ ಮಂಡಳಿ ನಿರ್ಧರಿಸಿದೆ" ಎಂದು ಬರೆದುಕೊಂಡಿದೆ. ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ ಮತ್ತು ಮಹಿಪಾಲ್ ಲೊಮ್ರೋರ್ ಅವರು ಆಯ್ಕೆ ಪಟ್ಟಿಯಲ್ಲಿದ್ದಾರೆ.
ಪಾಟಿದಾರ್ ಕಳೆದ ವರ್ಷದ ಮೆಗಾ ಹರಾಜಿನಲ್ಲಿ ಆಯ್ಕೆಯಾಗಲಿಲ್ಲ. ವಿಕೆಟ್ ಕೀಪರ್ ಲುವ್ನಿತ್ ಸಿಸೋಡಿಯಾ ಗಾಯಗೊಂಡ ಕಾರಣ ಅವರನ್ನು ತಂಡಕ್ಕೆ ಬದಲಿ ಆಟಗಾರನಾಗಿ ಸೇರಿಸಿಕೊಳ್ಳಲಾಗಿತ್ತು. ರಜತ್ 2022ರ ಐಪಿಎಲ್ನಲ್ಲಿ ತಂಡದ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಏಳು ಇನ್ನಿಂಗ್ಸ್‌ಗಳಲ್ಲಿ 152.75 ಸ್ಟ್ರೈಕ್ ರೇಟ್‌ನಿಂದ 333 ರನ್ ಗಳಿಸಿದ್ದರು.
ರೀಸ್ ಟೋಪ್ಲೆಗೆ ಗಾಯ: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರೀಸ್ ಟೋಪ್ಲಿ ಬೌಂಡರಿ ಉಳಿಸುವ ಯತ್ನದಲ್ಲಿ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದು 6 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆಯಲಿರುವ ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.