ಜೈಪುರ (ರಾಜಸ್ಥಾನ): ಬಟ್ಲರ್, ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಬಲದಿಂದ ರಾಜಸ್ಥಾನ ರಾಯಲ್ಸ್ ನಿಗದಿತ ಓವರ್ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟದಿಂದ 214 ರನ್ ಗಳಿಸಿದೆ. ಆರಂಭಿಕ ಪಂದ್ಯಗಳಲ್ಲಿ ಸತತ ಅರ್ಧಶತಕ ದಾಖಲಿಸಿದ್ದ ಬಟ್ಲರ್ ಇಂದು ಮತ್ತೆ ಲಯಕ್ಕೆ ಮರಳಿ 95 ರನ್ ಗಳಸಿದರು. ಬಲಿಷ್ಠ ಬೌಲಿಂಗ್ ಪಡೆಯ ತಂಡ ಎಂದೇ ಕರೆಸಿಕೊಳ್ಳುತ್ತಿದ್ದ ಸನ್ ರೈಸರ್ಸ್ಗೆ ಮಯಾಂಕ್ ಮಾರ್ಕಂಡೆ ಮತ್ತು ಮಾರ್ಕೊ ಜಾನ್ಸೆನ್ ದುಬಾರಿಯಾದರು. ಇದರಿಂದ ಹೈದರಾಬಾದ್ ತಂಡ 20 ಓವರ್ನಲ್ಲಿ 215 ರನ್ ಗುರಿ ಸಾಧಿಸಬೇಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಾಯಕನ ನಿರ್ಧಾರಕ್ಕೆ ತಕ್ಕಂತೆ ರಾಜಸ್ಥಾನ ತಂಡದ ಆಟಗಾರರು ಉತ್ತಮ ರನ್ ಪೇರಿಸಿದರು. ಆರ್ಆರ್ನ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ಬಟ್ಲರ್ 50 ರನ್ ಜೊತೆಯಾಟ ಆಡಿದರು. ಮುಂಬೈ ವಿರುದ್ಧ ಶತಕ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ಜೈಸ್ವಾಲ್ ತಮ್ಮ ಫಾರ್ಮ್ ಮುಂದುವರೆಸಿದರು.
ಆದರೆ ಜೈಸ್ವಾಲ್ 18 ಬಾಲ್ನಲ್ಲಿ 35 ರನ್ ಗಳಿಸಿದ್ದಾಗ ಮಾರ್ಕೊ ಜಾನ್ಸೆನ್ ಎಸೆತಕ್ಕೆ ಹುಕ್ ಶಾಟ್ ರೀತಿ ವಿಕೆಟ್ ಹಿಂದೆ ರನ್ ಗಳಿಸಲು ಹೋಗಿ ಕ್ಯಾಚ್ ಕೊಟ್ಟು ಔಟ್ ಆದರು. ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 1000 ರನ್ ಗಡಿ ತಲುಪಿದ ದಾಖಲೆ ಮಾಡಿದರು. ಅವರು ಐಪಿಎಲ್ನಲ್ಲಿ ಇದುವರೆಗೆ 34 ಪಂದ್ಯ ಆಡಿದ್ದು, 30.12 ರ ಸರಾಸರಿಯಲ್ಲಿ 1 ಶತಕ 6 ಅರ್ಧಶತಕದಿಂದ 1024 ರನ್ ಕಲೆಹಾಕಿದ್ದಾರೆ.
ಶತಕ ವಂಚಿತ ಬಟ್ಲರ್: ಜೈಸ್ವಾಲ್ ನಂತರ ಬಂದ ನಾಯಕ ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್ ಜೊತೆಗೆ ಜೊತೆಯಾಟ ಮುಂದುವರೆಸಿದರು. ಈ ಜೋಡಿ 134 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. 18.2 ಓವರ್ನ ವರೆಗೆ ಬಟ್ಲರ್ ತಮ್ಮ ಆಟವನ್ನು ಕೊಂಡೊಯ್ದರು. ಶತಕಕ್ಕೆ ಇನ್ನು 5 ರನ್ ಬಾಕಿ ಇದ್ದಾಗ ಎಲ್ಬಿಡ್ಲ್ಯೂಗೆ ಬಲಿಯಾದರು. ಈ ಶತಕ ದಾಖಲಾಗಿದ್ದಲ್ಲಿ ಗೇಲ್ ದಾಖಲೆ ಸರಿಗಟ್ಟುತ್ತಿದ್ದರು. ಇನ್ನಿಂಗ್ಸ್ನಲ್ಲಿ 59 ಬಾಲ್ ಎದುರಿಸಿದ ಅವರು 10 ಬೌಂಡರಿ ಮತ್ತು 4 ಸಿಕ್ಸ್ನಿಂದ 95 ರನ್ ಕಲೆಹಾಕಿದರು.