ಗುವಾಹಟಿ (ಅಸ್ಸಾಂ):ಐಪಿಎಲ್ 16ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತನ್ನ ಎರಡನೇ ಗೆಲವು ದಾಖಲಿಸಿದೆ. ರಾಜಸ್ಥಾನ ರಾಯಲ್ ವಿರುದ್ಧ 5 ರನ್ಗಳಿಂದ ಜಯ ಸಾಧಿಸಿದೆ. ಗೆಲುವಿಗಾಗಿ ಕೊನೆಯವರೆಗೆ ಹೋರಾಟ ನಡೆಸಿದ ರಾಯಲ್ಸ್ ತಂಡ ಮೊದಲ ಸೋಲು ಅನುಭವಿಸಿತು.
ಇಲ್ಲಿನ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್ಗಿಳಿದ ಪಂಜಾಬ್ ಕಿಂಗ್ಸ್ 197 ರನ್ಗಳನ್ನು ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ನಿರೀಕ್ಷಿತ ಆರಂಭವನ್ನು ಪಡೆಯಲಿಲ್ಲ. ಅರ್ಷದೀಪ್ ಸಿಂಗ್ ಆರಂಭದಲ್ಲೇ ಎರಡು ವಿಕೆಟ್ಗಳು ಪಡೆದು ಶಾಕ್ ನೀಡಿದರು. ಯಶಸ್ವಿ ಜೈಸ್ವಾಲ್ (11) ಮತ್ತು ರವಿಚಂದ್ರನ್ ಅಶ್ವಿನ್ ಶೂನ್ಯಕ್ಕೆ ಕ್ಯಾಚಿತ್ತು ನಿರ್ಗಮಿಸಿದರು.
ಬಳಿಕ ನಾಥನ್ ಎಲ್ಲಿಸ್ ಕೂಡ ಬಿಗಿ ಬೌಲಿಂಗ್ ಪ್ರದರ್ಶಿಸಿ, ಪ್ರಮುಖ ನಾಲ್ಕು ವಿಕೆಟ್ಗಳು ಕಬಳಿಸಿ ರಾಜಸ್ಥಾನ ತಂಡವನ್ನು ಕಟ್ಟಿ ಹಾಕಿದರು. ಜೋಸ್ ಬಟ್ಲರ್ (19), ನಾಯಕ ಸಂಜು ಸ್ಯಾಮ್ಸನ್ (42) ಮತ್ತು ದೇವದತ್ ಪಡಿಕ್ಕಲ್ (21) ಹಾಗೂ ರಿಯಾನ್ ಪರಾಗ್ (21) ತಂಡವನ್ನು ಮೇಲೆತ್ತುವ ಪ್ರಯತ್ನ ಮಾಡಿದರು.
ನಂತರ ಬಂದ ಶಿಮ್ರಾನ್ ಹೆಟ್ಮೆಯರ್ ಮತ್ತು ಧ್ರುವ ಜುರೆಲ್ ಬಿರುಸಿನ ಬ್ಯಾಟಿಂಗ್ ಬೀಸಿ ತಂಡವನ್ನು ಗೆಲುವಿನ ಅಂಚಿಗೆ ತಂದರು. ಕೊನೆಯ ಓವರ್ನಲ್ಲಿ ಗೆಲುವಿಗೆ 18 ರನ್ಗಳು ಬೇಕಾಗಿತ್ತು. ಆದರೆ,10 ರನ್ಗಳನ್ನು ಮಾತ್ರ ಕಲೆ ಹಾಕಲು ಸಾಧ್ಯವಾಯಿತು. ಮೂರನೇ ಎಸೆತದಲ್ಲಿ ಹೆಟ್ಮೆಯರ್ ರನ್ ಔಟ್ ಆಗಿದ್ದು, ರಾಯಲ್ಸ್ ಆಘಾತಕ್ಕೆ ಕಾರಣವಾಯಿತು. 18 ಎಸತೆಗಳಲ್ಲಿ ಮೂರು ಸಿಕ್ಸರ್ಗಳು, ಒಂದು ಬೌಂಡರಿ ಸಮೇತ 36 ರನ್ ಬಾರಿಸಿ ಶಿಮ್ರಾನ್ ತಂಡದ ಗೆಲುವಿಗೆ ಯತ್ನಿಸಿದರು. ಮತ್ತೊಂದೆಡೆ, 15 ಬಾಲ್ಗಳಲ್ಲಿ ಎರಡು ಸಿಕ್ಸರ್ ಮತ್ತು ಮೂರು ಬೌಂಡರಿಗಳೊಂದಿಗೆ ಧ್ರುವ 32* ರನ್ ಬಾರಿಸಿದರು. ಕೊನೆಗೆ ರಾಜಸ್ಥಾನ ತಂಡ 7 ವಿಕೆಟ್ ನಷ್ಟಕ್ಕೆ 192 ರನ್ ಮಾತ್ರ ಕಲೆ ಹಾಕುವಲ್ಲಿ ಸಾಧ್ಯವಾಯಿತು. ಇದರಿಂದ 5 ರನ್ಗಳಿಂದ ಸೋಲಿಗೆ ಶರಣಾಯಿತು.