ಕೋಲ್ಕತ್ತಾ (ಪಶ್ಚಿಮ ಬಂಗಾಳ):ಯಶಸ್ವಿ ಜೈಸ್ವಾಲ್ (98) ಮತ್ತು ನಾಯಕ ಸಂಜು ಸ್ಯಾಮ್ಸನ್ (48) ಅವರ ಬಿರುಸಿನ ಬ್ಯಾಟಿಂಗ್ನಿಂದಾಗಿ ರಾಜಸ್ಥಾನ ರಾಯಲ್ಸ್ ತಂಡವು ಕೊಲ್ಕತ್ತಾ ನೀಡಿದ್ದ 150 ರನ್ ಗುರಿಯನ್ನು ಕೇವಲ 13.1 ಓವರ್ನಲ್ಲಿ ತಲುಪಿ ಗೆಲುವಿನ ಕೇಕೆ ಹಾಕಿದೆ. ಜೊತೆಗೆ ಯಶಸ್ವಿ ಜೈಸ್ವಾಲ್ 13 ಎಸೆತಗಳಲ್ಲೇ 50ರ ಗಡಿ ತಲುಪುವ ಮೂಲಕ ಐಪಿಎಲ್ನಲ್ಲಿ ವೇಗದ ಅರ್ಧಶತಕ ದಾಖಲಿಸಿದರು.
ಇಲ್ಲಿನ ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ವೆಂಕಟೇಶ್ ಅಯ್ಯರ್ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ನಲ್ಲಿ 8 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತ್ತು. ಟ್ರೆಂಟ್ ಬೌಲ್ಟ್ ಆರಂಭದಲ್ಲೆ 2 ವಿಕೆಟ್ ಕಿತ್ತು ಆಘಾತ ನೀಡಿದರು. ಆರಂಭಿಕರಾದ ಜೇಸನ್ ರಾಯ್ 10 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರೆ, ಗುರ್ಬಾಜ್ 18 ರನ್ ಗಳಿಸಿ ಸಂದೀಪ್ ಶರ್ಮಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಕ್ರೀಸ್ಗೆ ಬಂದ ನಾಯಕ ನಿತೀಶ್ ರಾಣಾ ಮತ್ತು ವೆಂಕಟೇಶ್ ಅಯ್ಯರ್ ನಿಧಾನಗತಿಯ ಬ್ಯಾಟಿಂಗ್ ಮೊರೆಹೋದರು.
ನಾಯಕ ನಿತೀಶ್ ರನ್ ವೇಗವನ್ನು ಹೆಚ್ಚಿಸುವ ಯತ್ನದಲ್ಲಿ ಚಹಲ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಆಂಡ್ರೆ ರಸಲ್ (10), ರಿಂಕು ಸಿಂಗ್ (16) ಕೂಡ ಅಲ್ಪ ರನ್ ಗಳಿಸಿ ನಿರಾಸೆ ಮೂಡಿಸಿದರು. ಏಕಾಂಗಿ ಹೋರಾಟ ನಡೆಸಿದ ವೆಂಕಟೇಶ್ ಅಯ್ಯರ್ 57 ರನ್ ಗಳಿಸಿದರು. ಉಳಿದ ಬ್ಯಾಟರ್ಗಳಿಂದ ಉತ್ತಮ ಆಟ ಮೂಡಿಬರಲಿಲ್ಲ. ರಾಜಸ್ಥಾನ ರಾಯಲ್ಸ್ ಪರ ಯಜ್ವೇಂದ್ರ ಚಹಲ್ 4 ಓವರ್‌ಗಳಲ್ಲಿ 25 ರನ್ ನೀಡಿ 4 ವಿಕೆಟ್ ಉರುಳಿಸಿದರೆ. ಟ್ರೆಂಟ್ ಬೌಲ್ಟ್ 2, ಸಂದೀಪ್ ಶರ್ಮಾ ಮತ್ತು ಕೆಎಂ ಆಸಿಫ್ ತಲಾ ಒಂದು ವಿಕೆಟ್ ಪಡೆದರು.
150 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನದ ಪರ ಯಶಸ್ವಿ ಜೈಸ್ವಾಲ್ ಸಿಡಿಲಬ್ಬರ ಬ್ಯಾಟಿಂಗ್ ಪ್ರರ್ದಶಿಸಿದರು. ಮೊದಲ ಓವರ್ನಲ್ಲಿ ಎರಡು ಸಿಕ್ಸರ್, ಮೂರು ಬೌಂಡರಿ ಸಮೇತ 26 ರನ್ ಬಾರಿಸಿದರು. ನಂತರದ ಓವರ್ನಲ್ಲಿ ಜೋಸ್ ಬಟ್ಲರ್ ಶೂನ್ಯಕ್ಕೆ ರನೌಟ್ ಬಲೆಗೆ ಬಿದ್ದರು. ಆದರೆ, ಯಾವುದೇ ಆತಂಕಕ್ಕೆ ಒಳಗಾಗದೇ ಜೈಸ್ವಾಲ್ ತಮ್ಮ ಬ್ಯಾಟಿಂಗ್ ಮುಂದುವರೆಸಿದರು. ಇದೇ ಓವರ್ನ ಕೊನೆಯ ಎರಡು ಎಸೆತಗಳಲ್ಲಿ ಒಂದು ಬೌಂಡರಿ, ಸಿಕ್ಸರ್ ಸಿಡಿಸಿದರು. ಮೂರನೇ ಓವರ್ನಲ್ಲಿ ಹ್ಯಾಟ್ರಿಕ್ ಬೌಂಡರಿ ಬಾರಿಸುವ ಮೂಲಕ ಜೈಸ್ವಾಲ್ ಕೇವಲ 13 ಎಸೆತದಲ್ಲಿ ಅರ್ಧಶತಕ ದಾಖಲಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ವೇಗದ ಹಾಫ್ ಸೆಂಚುರಿ ದಾಖಲೆಯನ್ನು ಬರೆದರು.
ಬೌಂಡರಿ, ಸಿಕ್ಸರ್ಗಳ ಮೂಲಕ ಸಿಡಿಲಬ್ಬರ ಬ್ಯಾಟಿಂಗ್ ನೀಡುತ್ತಿದ್ದರೆ ಜೈಸ್ವಾಲ್ಗೆ ನಾಯಕ ಸಂಜು ಸ್ಯಾಮ್ಸನ್ ಕೂಡ ಉತ್ತಮ ಸಾಥ್ ನೀಡಿದರು. ಜೈಸ್ವಾಲ್ 47 ಎಸೆತದಲ್ಲಿ 98 ರನ್ ಸಿಡಿಸಿ ಅಜೇಯರಾಗಿ ಉಳಿದರು. ಜೈಸ್ವಾಲ್ ಇನ್ನಿಂಗ್ನಲ್ಲಿ ಒಟ್ಟಾರೆ 13 ಬೌಂಡರಿಗಳು ಮತ್ತು ಐದು ಸಿಕ್ಸರ್ಗಳು ಒಳಗೊಂಡಿದ್ದವು. ಸಂಜು ಸ್ಯಾಮ್ಸನ್ ಸಹ 29 ಎಸೆತದಲ್ಲಿ ಐದು ಸಿಕ್ಸರ್ ಮತ್ತು ಎರಡು ಬೌಂಡರಿ ಸಮೇತ ಅಜೇಯ 48 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 13.1 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿ 9 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ರಾಜಸ್ಥಾನ ಏರಿದೆ.