ಜೈಪುರ (ರಾಜಸ್ಥಾನ):ಮುಂಬೈ ಇಂಡಿಯನ್ಸ್ ವಿರುದ್ಧ ಸೋತ ನಂತರ, ರಾಜಸ್ಥಾನ್ ರಾಯಲ್ಸ್ (RR) ಐಪಿಎಲ್ 2023 ಅಂಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ, ಆಡಿದ ಒಂಬತ್ತು ಪಂದ್ಯಗಳಲ್ಲಿ 5 ರಲ್ಲಿ ಗೆದ್ದಿದೆ. ಇಂದು ಆರ್ಆರ್ ಗುಜರಾತ್ ಟೈಟಾನ್ಸ್ (GT) ಅನ್ನು ತಮ್ಮ ತವರು ಮೈದಾನವಾದ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಎದುರಿಸಲಿದೆ. ಗುಜರಾತ್ ಟೈಟಾನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ 5 ರನ್ನ ಸೋಲನುಭವಿಸಿದರೂ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಆ ಸ್ಥಾನವನನ್ನು ಉಳಿಸಿಕೊಳ್ಳಲು ಜಿಟಿ ಇಂದಿನ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಬೇಕಿದೆ.
ರಾಜಸ್ಥಾನ ಉತ್ತಮ ಬೌಲಿಂಗ್ ಪಡೆ ಹೊಂದಿದ್ದರೂ ಮುಂಬೈ ವಿರುದ್ಧ ಕೊನೆಯ ಪಂದ್ಯದಲ್ಲಿ 212 ರನ್‌ಗಳ ದೊಡ್ಡ ಮೊತ್ತವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ವೇಗದ ಬೌಲರ್ ಟ್ರೆಂಟ್ ಬೌಲ್ಟ್, ಆಲ್‌ರೌಂಡರ್ ಜೇಸನ್ ಹೋಲ್ಡರ್, ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಸೇನ್ ಎಲ್ಲರೂ ದುಬಾರಿಯಾಗಿದ್ದರು. ಈಗ ತವರಿನ ಅಂಗಳದಲ್ಲಿ ಬೌಲರ್‌ಗಳು ಉತ್ತಮ ನಿರ್ವಹಣೆಯ ನಿರೀಕ್ಷೆಯಲ್ಲಿದ್ದಾರೆ. ಈ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ ಗುಜರಾತ್ ಮಣಿಸಿರುವುದು ರಾಜಸ್ಥಾನಕ್ಕೆ ಸ್ಥೈರ್ಯ ತುಂಬಲಿದೆ.
ಟೈಟಾನ್ಸ್ ಮುಂಬೈ ವಿರುದ್ಧ ಬ್ಯಾಟಿಂಗ್ ವೈಫಲ್ಯ ಕಂಡಿತ್ತು. 130 ರನ್ ಗುರಿಯನ್ನು ಸಾಧಿಸಲು ಹಾಲಿ ಚಾಂಪಿಯನ್ ಪಡೆ ಗುಜರಾತ್ಗೆ ಆಗಿರಲಿಲ್ಲ. ನಾಯಕ ಹಾರ್ದಿಕ್ ಪಾಂಡ್ಯ ಕೊನೆಯವರೆಗೆ ಬ್ಯಾಟ್ ಮಾಡಿದರೂ 5 ರನ್ನ ಸೋಲು ಕಂಡಿತು. ಇಂದು ರಾಜಸ್ಥಾನದ ತವರು ಮೈದಾನದಲ್ಲಿ ಮತ್ತೆ ಕಳಪೆ ಬ್ಯಾಟಿಂಗ್ ಫಾರ್ಮ್ ಮುಂದುವರೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ತಂಡದ ಮೇಲಿದೆ. ಮೇ 9 ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ರಾಷ್ಟ್ರೀಯ ತಂಡವನ್ನು ಸೇರಲು ಜೋಶುವಾ ಲಿಟಲ್ ತೆರಳುವ ಕಾರಣ ಇದು ಅವರಿಗೆ ಕೊನೆಯ ಪಂದ್ಯವಾಗಿರಬಹುದು.
ಕಳೆದ ಸೀಸನ್ನಂತೆಯೇ ಹಾರ್ದಿಕ್ ನಾಯಕತ್ವದ ಪಡೆ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಪ್ರಸ್ತುತ 9 ರಲ್ಲಿ 6 ಪಂದ್ಯಗಳನ್ನು ಗೆದ್ದು 12 ಅಂಕದಿಂದ ಅಂಕ ಪಟ್ಟಿಯ ಅಗ್ರಸ್ಥಾನಹೊಂದಿದೆ. ಗುಜರಾತ್ ಆರಂಭಿ ಶುಭಮನ್ ಗಿಲ್ ಗೋಲ್ಡನ್ ಫಾರ್ಮ್ನಲ್ಲಿದ್ದು ಸತತ ಅರ್ಧಶತಕದ ಆಟ ಪ್ರದರ್ಶಿಸುತ್ತಿದ್ದಾರೆ. ಇವರ ಜೊತೆಗೆ ನಾಯಕ ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್ ಮತ್ತು ರಾಹುಲ್ ತೆವಾಟಿಯಾ ಕೂಡಾ ತಮ್ಮ ಸ್ಥಾನದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇದರಿಂದ ಈ ಬಾರಿ ಗುಜರಾತ್ ಬಲಿಷ್ಠ ತಂಡವಾಗಿ ಕಾಣಿಸಿಕೊಳ್ಳುತ್ತಿದೆ.