ಗುವಾಹಟಿ (ಅಸ್ಸೋಂ):ನಾಯಕ ಡೇವಿಡ್ ವಾರ್ನರ್ ಅವರ ಶತಾಯಗತಾಯ ಪ್ರಯತ್ನದ ಬೆನ್ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ಗೆ ಗೆಲುವಿನ ಸಿಹಿ ಸಿಗಲಿಲ್ಲ. ವಾರ್ನರ್ ಒಂದು ಬದಿಯಲ್ಲಿ ರನ್ ಗಳಿಸುತ್ತಿದ್ದರೆ ಮತ್ತೊಂದೆಡೆ ಡೆಲ್ಲಿ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ಮಾಡಿದರು. ಬೋಲ್ಟ್, ಯಜುವೇಂದ್ರ ಚಹಾಲ್ ಮತ್ತು ರವಿಚಂದ್ರನ್ ಅಶ್ವಿನ್ ಡೆಲ್ಲಿ ಬ್ಯಾಟರ್ಗಳಿಗೆ ಕ್ರೀಸ್ನಲ್ಲಿ ನೆಲೆಯೂರಲು ಬಿಡಲೇ ಇಲ್ಲ.
20 ಓವರ್ಗೆ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಶಕ್ತವಾಗಿ, 57 ರನ್ನ ಸೋಲನುಭವಿಸಿತು. ಡೆಲ್ಲಿ ಕ್ಯಾಪಿಟಲ್ಸ್ಗೆ ಇದು ಮೂರನೇ ಸೋಲಾಗಿದ್ದು ಅಂಕ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ತಲುಪಿದೆ. ವಾರ್ನರ್ ಏಕಾಂಗಿಯಾಗಿ ಹೋರಾಡಿ 65 ರನ್ ಗಳಿಸಿದರು. 6 ಜನ ಡೆಲ್ಲಿ ಬ್ಯಾಟರ್ಗಳು ಒಂದಂಕಿ ಆಟಕ್ಕೆ ವಿಕೆಟ್ ಕೊಟ್ಟು ತಂಡದ ಸೋಲಿಗೆ ಕಾರಣರಾದರು. ವಾರ್ನರ್ ಜೊತೆಗೆ ರಿಲೀ ರೋಸ್ಸೌ 14 ಮತ್ತು ಲಲಿತ್ ಯಾದವ್ 38 ರನ್ ಗಳಿಸಿದ್ದು ಬಿಟ್ಟರೆ ಮತ್ತಾರು ರನ್ ಕಲೆಹಾಕಲಿಲ್ಲ.
ಇಂಪ್ಯಾಕ್ಟ್ ಪ್ಲೇಯರ್ ಪ್ಲಾನ್ ಫ್ಲಾಫ್:ಟಾಸ್ ಗೆದ್ದು ಬೌಲಿಂಗ್ ತೆಗೆದು ಕೊಂಡು ತಂಡದಲ್ಲಿ ಒಬ್ಬ ಹೆಚ್ಚಿನ ಬೌಲರ್ ಆಡಿಸಿದ ವಾರ್ನರ್, ಬ್ಯಾಟಿಂಗ್ ವೇಳೆ ಖಲೀಲ್ ಅಹಮದ್ ಅವರ ಬದಲಿಯಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಪೃಥ್ವಿ ಶಾರನ್ನು ತಂದರು. ಆದರೆ ಡೆಲ್ಲಿ ಶೂನ್ಯ ರನ್ಗೆ 2 ವಿಕೆಟ್ ಕಳೆದುಕೊಂಡಿತು. ಪೃಥ್ವಿ ಶಾ ಮತ್ತು ಮನೀಷ್ ಪಾಂಡೆ ಡಕ್ ಔಟ್ ಆದರು. ರಾಜಸ್ಥಾನದ ಟ್ರೆಂಟ್ ಬೌಲ್ಟ್ ಮತ್ತು ಯಜುವೇಂದ್ರ ಚಹಾಲ್ ತಲಾ ಮೂರು ವಿಕೆಟ್ ಪಡೆದರೆ, ಆರ್ ಅಶ್ವಿನ್ 2 ಹಾಗೂ ಸಂದೀಪ್ ಶರ್ಮಾ 1 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್:ರಾಜಸ್ಥಾನ ರಾಯಲ್ಸ್ ಆರಂಭಿಕರಾದ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಆಕರ್ಷಕ ಅರ್ಧಶತಕದ ಆಟದ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 200 ರನ್ ಅಗತ್ಯವಿದೆ. ಟಾಸ್ ನಿರ್ಣಯದಂತೆ ಅಲ್ಪ ಮೊತ್ತಕ್ಕೆ ರಾಯಲ್ಸ್ನ್ನು ಕಟ್ಟಿಹಾಕುವಲ್ಲಿ ಕ್ಯಾಪಿಟಲ್ಸ್ ಎಡವಿದೆ.