ಧರ್ಮಶಾಲಾ (ಹಿಮಾಚಲ ಪ್ರದೇಶ):ಪಂಜಾಬ್ ಕಿಂಗ್ಸ್ ವಿರುದ್ಧರಾಜಸ್ಥಾನ ರಾಯಲ್ಸ್ ತಂಡ ನಾಲ್ಕು ವಿಕೆಟ್ಗಳ ರೋಚಕ ಜಯ ದಾಖಲಿಸಿದೆ. ಈ ಪಂದ್ಯದ ಸೋಲಿನೊಂದಿಗೆ ಐಪಿಎಲ್ ಟೂರ್ನಿನಿಂದ ಶಿಖರ್ ಧವನ್ ಪಡೆ ಹೊರ ಬಿದ್ದಿದೆ. ಮತ್ತೊಂದೆಡೆ, ನಿರ್ಣಾಯಕ ಪಂದ್ಯದಲ್ಲಿ ರಾಯಸ್ಥಾನ ತಂಡ ಗೆದ್ದು ಐದನೇ ಸ್ಥಾನಕ್ಕೆ ಏರಿದರೂ ಪ್ಲೇ ಆಫ್ ಹಾದಿ ಕಠಿಣವಾಗಿದೆ. ಮುಂದಿನ ಪಂದ್ಯಗಳಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಫಲಿತಾಂಶ ಮೇಲೆ ರಾಯಲ್ಸ್ ಭವಿಷ್ಯ ನಿಂತಿದೆ.
ಇಲ್ಲಿನ ಧರ್ಮಶಾಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಪಂಬಾಜ್ ಪಂದ್ಯ 187 ರನ್ಗಳನ್ನು ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡವು ಇನ್ಸಿಂಗ್ಸ್ನ ಎರಡು ಎಸೆತಗಳು ಬಾಕಿ ಇರುವಾಗಲೇ 189 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ರಾಜಸ್ಥಾನ ಪರ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಶೂನ್ಯಕ್ಕೆ ಔಟಾದರು. ನಂತರದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಕನ್ನಡಿಗ ದೇವದತ್ ಪಡಿಕ್ಕಲ್ 73 ರನ್‌ಗಳ ಜೊತೆಯಾಟ ನೀಡಿ ಆಸರೆಯಾದರು.
ದೇವದತ್ ಪಡಿಕ್ಕಲ್ 30 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳ ಸಮೇತ 51 ರನ್ ಬಾರಿಸಿ ಮಿಂಚಿದರು. ಸಂಜು ಸಮ್ಸನ್ ಕೇವಲ 2 ರನ್ಗೆ ವಿಕೆಟ್ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ, ಯಶಸ್ವಿ ಜೈಸ್ವಾಲ್ 36 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 50 ರನ್ ಬಾರಿಸಿ ಗಮನ ಸೆಳೆದರು. ರಿಯಾನ್ ಪರಾಗ್ 12 ಎಸೆತದಲ್ಲಿ 2 ಸಿಕ್ಸರ್ 1 ಬೌಂಡರಿಯೊಂದಿಗೆ 20 ರನ್‌ಗಳ ಕಾಣಿಕೆ ನೀಡಿದರು. ಇನ್ನಿಂಗ್ಸ್‌ನ ಕೊನೆಯಲ್ಲಿ ಶ್ರಿಮೋನ್ ಹೆಟ್ಮೆಯರ್ 28 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಮೇತ 46 ರನ್ ಸಿಡಿಸಿ ತಂಡದ ಗೆಲುವನ್ನು ಸುಲಭ ಮಾಡಿದರು. ಕೊನೆಗೆ ಧ್ರುವ ಜುರೆಲ್ ಅಜೇಯ 18 ಮತ್ತು ಟ್ರೆಂಟ್ ಬೌಲ್ಟ್ 1 ರನ್ ಗಳಿಸಿ ತಂದವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ ಸ್ಯಾಮ್ ಕರನ್, ಜಿತೇಶ್ ಶರ್ಮಾ ಮತ್ತು ಶಾರುಖ್ ಖಾನ್ ಭರ್ಜರಿ ಬ್ಯಾಟಿಂಗ್ ಬಲದಿಂದ ಪಂಜಾಬ್ ಕಿಂಗ್ಸ್ ನಿಗದಿತ ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 187 ರನ್ಗಳನ್ನು ಕಲೆ ಹಾಕಿತ್ತು. ಮೊದಲ ಹತ್ತು ಓವರ್ಗಳಲ್ಲಿ ರಾಜಸ್ಥಾನ ಬೌಲರ್ಗಳು ಹಿಡಿತ ಸಾಧಿಸಿದರು. ಇದರಿಂದ ಪಂಜಾಬ್ ತಂದ ಆರಂಭದಲ್ಲೇ ಸಂಕಷ್ಟಕ್ಕೆ ಒಳಗಾಯಿತು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಪ್ರಭಾಸಿಮ್ರಾನ್ ಸಿಂಗ್ ಕೇವಲ 2 ರನ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಅಥರ್ವ ಟೈಡೆ 19 ರನ್ ಗಳಿಸಿದ ನಿರ್ಗಮಿಸಿದರು.