ಮೊಹಾಲಿ (ಪಂಜಾಬ್):ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರರ್ದಶಿಸಿದ ಮುಂಬೈ ಇಂಡಿಯನ್ಸ್ ತಂಡ ಆರು ವಿಕೆಟ್ಗಳ ಗೆಲುವು ಸಾಧಿಸಿದೆ. ಪಂಜಾಬ್ ನೀಡಿದ್ದ 215 ರನ್ಗಳ ಬೃಹತ್ ಗುರಿಯನ್ನು ರೋಹಿತ್ ಶರ್ಮಾ ಪಡೆ ಇನ್ನೂ ಏಳು ಎಸೆತಗಳು ಬಾಕಿ ಇರುವಾಗಲೇ ಚೇಸ್ ಮಾಡಿ ಜಯದ ಕೇಕೆ ಹಾಕಿದೆ.
ಇಲ್ಲಿನ ಐಎಸ್ ಬಿಂದ್ರಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕೇವಲ ಮೂರು ವಿಕೆಟ್ ಕಳೆದುಕೊಂಡು 214 ರನ್ಗಳನ್ನು ಕಲೆ ಹಾಕಿತ್ತು. ಈ ದೊಡ್ಡ ಮೊತ್ತವನ್ನು ಮುಂಬೈ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅಬ್ಬರ ಮತ್ತು ಕೊನೆಯ ಹಂತದಲ್ಲಿ ತಿಲಕ್ ವರ್ಮಾ, ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ನಿಂದ ಗೆಲುವಿನ ದಡ ತಲುಪಿತು.
ಮುಂಬೈ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ (0) ವಿಕೆಟ್ ಕಳೆದುಕೊಂಡು ಆಘಾತಕ್ಕೀಡಾಗಿತ್ತು. ಆದರೆ, ಇಶಾನ್ ಕಿಶನ್ ಹಾಗೂ ಕ್ಯಾಮರೂನ್ ಗ್ರೀನ್ ಅರ್ಧಶತಕದ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. 18 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ ಕ್ಯಾಮರೂನ್ ಗ್ರೀನ್ 23 ರನ್ ಸಿಡಿಸಿ ಔಟಾದರು. ನಂತರ ಬಂದ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಮೂರನೇ ವಿಕೆಟ್ಗೆ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ 116 ರನ್ಗಳ ಜೊತೆಯಾಟ ನೀಡಿದರು. ಇಬ್ಬರು ಬ್ಯಾಟರ್ಗಳು ಪಂಜಾಬ್ ಬೌಲರ್ಗಳ ಬೆವರಿಸಿ ಆಕರ್ಷಕ ಅರ್ಧಶತಕಗಳನ್ನು ಸಿಡಿಸಿದರು. 31 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಎರಡು ಸಿಕ್ಸರ್ ಮತ್ತು ಎಂಟು ಬೌಂಡರಿಯೊಂದಿಗೆ 66 ರನ್ ಸಿಡಿಸಿ ನಿರ್ಗಮಿಸಿದರು. ಮತ್ತೊಂದೆಡೆ, ಇಶಾನ್ ಕಿಶನ್ 41 ಎಸೆತದಲ್ಲಿ ನಾಲ್ಕು ಸಿಕ್ಸರ್, ಏಳು ಬೌಂಡರಿಗಳ ಸಮೇತ 75 ರನ್ ಬಾರಿಸಿ ಔಟಾದರು. ಈ ಹಂತದಲ್ಲಿ ಟಿಮ್ ಡೇವಿಡ್ ಹಾಗೂ ತಿಲಕ್ ವರ್ಮಾ ಅಜೇಯ ಆಟವಾಡಿದರು. 10 ಬಾಲ್ಗಳಲ್ಲಿ ಮೂರು ಭರ್ಜರಿ ಸಿಕ್ಸರ್, ಒಂದು ಬೌಂಡರಿಯೊಂದಿಗೆ ತಿಲಕ್ 26 ರನ್ ಸಿಡಿಸಿದರೆ, ಡೇವಿಡ್ 10 ಎಸೆತದಲ್ಲಿ ಮೂರು ಬೌಂಡರಿ ಸಮೇತ 19 ರನ್ ಬಾರಿಸಿದರು. ಈ ಮೂಲಕ ಮುಂಬೈ 18.5 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.