ಮೊಹಾಲಿ (ಪಂಜಾಬ್): ಇಂಡಿಯನ್ ಪ್ರೀಮಿಯರ್ ಲೀಗ್‌ನ 38ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಮೊಹಾಲಿಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವೆ ಇದುವರೆಗೆ ನಡೆದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ಗೆದ್ದಿದ್ದರೆ, ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಕೊನೆಯ ಓವರ್‌ನಲ್ಲಿ 2 ವಿಕೆಟ್‌ಗಳಿಂದ ಗೆದ್ದಿದೆ. ಗೆದ್ದ ತಂಡಕ್ಕೆ ಅಗ್ರ ಸ್ಥಾನಕ್ಕೆ ಏರುವ ಅವಕಾಶ ಇದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಇದುವರೆಗೆ ಆಡಿದ 7 ಪಂದ್ಯಗಳಲ್ಲಿ 4 ಗೆಲುವು ಮತ್ತು 3 ಸೋಲಿನೊಂದಿಗೆ 8 ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ತಂಡವು 4 ಗೆಲುವು ಮತ್ತು 3 ಸೋಲಿನೊಂದಿಗೆ 8 ಅಂಕಗಳಿಂದ ರನ್ ರೇಟ್ ಪರಿಣಾಮ ಆರನೇ ಸ್ಥಾನದಲ್ಲಿದೆ. ಆದ್ದರಿಂದ, ಈ ಪಂದ್ಯವನ್ನು ಗೆಲ್ಲುವುದರೊಂದಿಗೆ, ತರಡೂ ತಂಡಗಳು ರನ್ ರೇಟ್ ಸುಧಾರಿಸಿಕೊಂಡು ಅಗ್ರಸ್ಥಾನಕ್ಕೆರುವ ಮತ್ತು ಟೂರ್ನಿಯಲ್ಲಿ ಪ್ಲೇ ಆಫ್ ಅವಕಾಶ ಉಳಿಸಿಕೊಳ್ಳುವ ಚಿಂತನೆಯಲ್ಲಿವೆ.
ಶುಕ್ರವಾರ ಮೊಹಾಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳ ಇಲೆವೆನ್ ನಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. ಲಕ್ನೋ ತಂಡ ಆರಂಭಿಕ ಬ್ಯಾಟರ್ ಆಗಿ ಕ್ವಿಂಟನ್ ಡಿ ಕಾಕ್ ಅವರನ್ನು ಕಣಕ್ಕಿಳಿಸಬಹುದು. ಇನ್ನು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಭುಜದ ಗಾಯಕ್ಕೆ ತುತ್ತಾದ ಶಿಖರ್ ಧವನ್ ಕಳೆದ ಕೆಲ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಅಭ್ಯಾಸದಲ್ಲಿ ಶಿಖರ್ ತೊಡಗಿಕೊಂಡಿರುವುದು ಕಂಡು ಬಂದಿರುವುದರಿಂದ ಮತ್ತೆ ನಾಯಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಲಕ್ನೋದ ಮಾರ್ಕ್ ವುಡ್ ಅಲಭ್ಯರಾಗಿರಲಿದ್ದಾರೆ.