ಮೊಹಾಲಿ (ಪಂಜಾಬ್): ಇಂಡಿಯನ್ ಪ್ರೀಮಿಯರ್ ಲೀಗ್ನ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದ ಮೂಲಕ ಲಖನೌ ಸೂಪರ್ ಜೈಂಟ್ಸ್ ಭರ್ಜರಿ ಗೆಲುವು ದಾಖಲಿಸಿದೆ. ಲಖನೌ ನೀಡಿದ್ದ 258 ರನ್‌ಗಳ ಗುರಿ ಬೆನ್ನಟ್ಟಿದ್ದ ಪಂಜಾಬ್ ಇನ್ನಿಂಗ್ಸ್ ಒಂದು ಎಸೆತ ಬಾಕಿ ಇರುವಾಗ 201 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ಕೆಎಲ್ ರಾಹುಲ್ ಪಡೆ 56 ರನ್ಗಳಿಂದ ಜಯದ ಕೇಕೆ ಹಾಕಿತು.
ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ಕೈಲ್ ಮೇಯರ್ಸ್, ಮಾರ್ಕಸ್ ಸ್ಟೋಯ್ನಿಸ್ ಅರ್ಧಶತಕಗಳ ನೆರವು ಮತ್ತು ನಿಕೋಲಸ್ ಪೂರನ್ ಮತ್ತು ಆಯುಷ್ ಬಡೋನಿ ಅವರ ಸ್ಫೋಟಕ ಬ್ಯಾಟಿಂಗ್ನಿಂದ ಐದು ವಿಕೆಟ್ ನಷ್ಟಕ್ಕೆ 257 ರನ್ಗಳನ್ನು ಪೇರಿತ್ತು. ಈ ಬೃಹತ್ ಸ್ಕೋರ್ ಬೆನ್ನಟ್ಟಿದ ಪಂಜಾಬ್ ಪರ ಅರ್ಧಶತಕ ಬಾರಿಸಿದ ಅಥರ್ವ ಟೈಡೆ (66) ಮಾತ್ರ ಪ್ರತಿಯಾಗಿ ಹೋರಾಟ ನಡೆಸಿದರು.
ಪಂಜಾಬ್ಗೆ ಉತ್ತಮ ಆರಂಭವೇ ಸಿಗಲಿಲ್ಲ. ಆರಂಭಿಕರಾದ ನಾಯಕ ಶಿಖರ್ ಧವನ್ (1) ಮತ್ತು ಪ್ರಭಾಸಿಮ್ರಾನ್ ಸಿಂಗ್ (9) ಬೇಗನೆ ಪೆವಿಯಲಿನ್ ಸೇರಿದರು. ಈ ಮೂಲಕ ನಾಲ್ಕನೇ ಓವರ್ನ ನಾಲ್ಕನೇ ಎಸೆತದವ ವೇಳೆಗೆ ಪಂಜಾಬ್ 31 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ಮೂರನೇ ಕ್ರಮಾಂಕದಲ್ಲಿ ಅಥರ್ವ ಟೈಡೆ ಮತ್ತು ಸಿಕಂದರ್ ರಝಾ ತಂಡವನ್ನು ಉತ್ತಮ ಮುನ್ನಡೆಸಿದರು. ಅಥರ್ವ ಹೆಚ್ಚು ಆಕ್ರಮಣ ಆಟವಾಡಲು ಮುಂದಾಗ ರಝಾ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು.
ಅಥರ್ವ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.ಇದರೊಂದಿಗೆ ಪಂಜಾಬ್ 11ನೇ ಓವರ್ ನಲ್ಲಿ 100 ರನ್ ದಾಟಲು ಶಕ್ತವಾಯಿತು. ಆದರೆ, ಈ ವೇಳೆ 22 ಎಸೆತಗಳಲ್ಲಿ 36 ರನ್ ಗಳಿಸಿದ್ದ ರಝಾ ಔಟಾದರು. ಇವರಿಬ್ಬರು ಮೂರನೇ ವಿಕೆಟ್‌ಗೆ 61 ರನ್ ಕಲೆಹಾಕಿದರು. ಇದಾದ ಸ್ವಲ್ಪ ಹೊತ್ತದಲ್ಲೇ ಅಥರ್ವ ಕೂಡ ವಿಕೆಟ್ ಪತನವಾಯಿತು. ಹೀಗಾಗಿ 13 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 127ಕ್ಕೆ ಪಂಜಾಬ್ ಕುಸಿಯಿತು. 36 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಥರ್ವ 66 ರನ್ ಬಾರಿಸಿದರು.
ನಂತರ ಲಿಯಾಮ್ ಲಿವಿಂಗ್‌ಸ್ಟನ್ ಮತ್ತು ಸ್ಯಾಮ್ ಕುರ್ರಾನ್, ಜಿತೇಶ್ ಶರ್ಮಾ ಅಬ್ಬರದ ಆಟವಾಡಿದರಾದರೂ ಮೂವರಿಗೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಎರಡೇ ಓವರ್ನ ಅಂತರದಲ್ಲಿ ಲಿವಿಂಗ್‌ಸ್ಟನ್ (23) ಮತ್ತು ಸ್ಯಾಮ್ ಕರ್ರಾನ್ (21), ಜಿತೇಶ್ ಶರ್ಮಾ (24) ವಿಕೆಟ್ ಒಪ್ಪಿಸಿದರು. ಇದು ಲಖನೌ ಗೆಲುವನ್ನು ಖಚಿತಪಡಿಸಿತು.
ರಾಹುಲ್ ಚಹಾರ್ (0), ಕಗಿಸೊ ರಬಾಡ (0) ಹಾಗೂ ಶಾರುಖ್ ಖಾನ್ (6) ಕೂಡ ಔಟಾಗುವ ಮೂಲಕ ಪಂಜಾಬ್ ಇನಿಂಗ್ಸ್ಗೆ ತೆರೆ ಬಿದ್ದಿತು. ಲಖನೌ ಪರ ಒಂಬತ್ತು ಆಟಗಾರರು ಬೌಲಿಂಗ್ ಮಾಡಿದರು. ಯಶ್ ಠಾಕೂರ್ ನಾಲ್ಕು ವಿಕೆಟ್ ಕಬಳಿಸಿದರೆ, ನವೀನ್ ಉಲ್ ಹಕ್ ಮೂರು ಮತ್ತು ರವಿ ಬಿಷ್ಣೋಯ್ ಎರಡು ಹಾಗೂ ಮಾರ್ಕಸ್ ಸ್ಟೋನಿಸ್ ಒಂದು ವಿಕೆಟ್ ಪಡೆದರು.