ಮೊಹಾಲಿ (ಪಂಜಾಬ್):ಕೆಕೆಆರ್ ಗೆಲುವಿಗೆ 46 ರನ್ ಬಾಕಿ ಇರುವಾಗ ಮಳೆ ಬಂದ ಹಿನ್ನೆಲೆ ಪಂದ್ಯ ಸ್ಥಗಿತಗೊಂಡು, 7 ರನ್ನಿಂದ ಪಂಜಾಬ್ ಕಿಂಗ್ಸ್ ಗೆಲುವು ಸಾಧಿಸಿದೆ. 16 ಓವರ್ ವೇಳೆಗೆ ಕೆಕೆಆರ್ 146ಕ್ಕೆ 7 ವಿಕೆಟ್ ನಷ್ಟ ಅನುಭವಿಸಿತ್ತು. ಆಲ್ರೌಂಡರ್ಗಳಾದ ಶಾರ್ದೂಲ್ ಠಾಕೂರ್ (8) ಮತ್ತು ಸುನಿಲ್ ನರೈನ್ (7) ಕ್ರೀಸ್ನಲ್ಲಿದ್ದರು.
ಕೊಲ್ಕತ್ತಾ ನೈಟ್ ರೈಡರ್ಸ್ಗೆ ಕೊನೆಯ 4 ಓವರ್ನಲ್ಲಿ 46 ರನ್ ಬೇಕಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಪಂಜಾಬ್ 16 ಓವರ್ ವೇಳೆಗೆ 4 ವಿಕೆಟ್ ನಷ್ಟದಿಂದ 153 ರನ್ ಗಳಿಸಿತ್ತು. ಕೆಕೆಆರ್ 7 ರನ್ನ ಹಿನ್ನೆಡೆಯಲ್ಲಿದ್ದ ಕಾರಣ ಡಿಎಲ್ಎಸ್ ನಿಮಯದ ಪ್ರಕಾರ ಸೋಲನುಭವಿಸಬೇಕಾಯಿತು.
ಕೆಕೆಆರ್ನ್ನು ಅರ್ಶ್ದೀಪ್ ಸಿಂಗ್ ಕಾಡಿದರು, 2 ರನ್ ಗಳಿಸಿದ್ದ ಮನದೀಪ್ ಸಿಂಗ್ ವಿಕೆಟ್ ತೆಗೆದು ಕೊಲ್ಕತ್ತಾಗೆ ಆರಂಭಿಕ ಆಘಾತ ನೀಡಿದರು. ಅವರ ಬೆನ್ನಲ್ಲೇ ಅನುಕುಲ್ ರಾಯ್ (4) ವಿಕೆಟ್ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ವೆಂಕಟೇಶ್ ಅಯ್ಯರ್ 28 ಬಾಲ್ನಲ್ಲಿ 1 ಸಿಕ್ಸ್ ಮತ್ತು 3 ಬೌಂಡರಿಯಿಂದ 34 ರನ್ ಗಳಿಸಿದ್ದರು. ಅವರ ವಿಕೆಟ್ ಸಹ ಪಡೆದು ಸಿಂಗ್ ಮಿಂಚಿದರು.
ರಹಮಾನುಲ್ಲಾ ಗುರ್ಬಾಜ್ 22, ನಿತೀಶ್ ರಾಣ 24, ರಿಂಕು ಸಿಂಗ್ 4 ಮತ್ತು ಕೆಕೆಆರ್ ಹೊಡಿಬಡಿ ದಾಂಡಿಗ ರಸೆಲ್ 34 ರನ್ ಗಳಿಸಿ ಔಟ್ ಆದರು. ರಸೆಲ್ ಬ್ಯಾಟ್ ಗುಡುಗಲು ಆರಂಭಿಸಿತ್ತು ಮತ್ತು ರನ್ನ ತುಂತುರು ಆಗುತ್ತಿದ್ದಂತೆ ಸ್ಯಾಮ್ ಕರ್ರಾನ್ ವಿಕೆಟ್ ಪಡೆದುಕೊಂಡರು. ಇಲ್ಲವಾದಲ್ಲಿ ಮಳೆಗೂ ಮುನ್ನ ರಸೆಲ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು.
ಮೊದಲ ಇನ್ನಿಂಗ್ಸ್: ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್,ಭಾನುಕಾ ರಾಜಪಕ್ಸೆ ಮತ್ತು ನಾಯಕ ಶಿಖರ್ ಧವನ್ ಅವರ ಭರ್ಜರಿ ಜೊತೆಯಾಟದ ನೆರವಿನಿಂದ 192 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಕೆಕೆಆರ್ ಪರ ಪರಿಣಾಮಕಾರಿ ಬೌಲಿಂಗ್ ಮಾಡಿದ ಟಿಮ್ ಸೌಥಿ ಎರಡು ವಿಕೆಟ್ ಪಡೆದು ಬೃಹತ್ ರನ್ ಪೇರಿಸಲು ಕಡಿವಾಣ ಹಾಕಿದ್ದರು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶಿಖರ್ ಧವನ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಕೆಕೆಆರ್ ಬೌಲರ್ಗಳನ್ನು ಧವನ್ ತಂಡದ ಐವರು ಬ್ಯಾಟರ್ಗಳು ಸಮರ್ಥವಾಗಿ ಎದುರಿಸಿ 191 ರನ್ ಗಳಿಸಿದರು. ಆರಂಭಿಕರಾಗಿ ಬಂದ ಪ್ರಭಾಸಿಮ್ರಾನ್ ಸಿಂಗ್ ಮತ್ತು ಶಿಖರ್ 23 ರನ್ ಪೇರಿಸುತ್ತಿದ್ದಂತೆ ಟಿಮ್ ಸೌಥಿ ಇವರ ಜೊತೆಯಾಟ ಮುರಿದರು.