ಧರ್ಮಶಾಲಾ (ಹಿಮಾಚಲ ಪ್ರದೇಶ): ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯ 64ನೇ ಪಂದ್ಯವನ್ನು ಧರ್ಮಶಾಲಾ ಕ್ರೀಡಾಂಗಣದಲ್ಲಿ ಆಡಲಾಗುತ್ತಿದೆ. ಇಲ್ಲಿ ಪಂಜಾಬ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ನ್ನು ಎದುರಿಸಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಲೀಗ್ನಿಂದ ಹೊರಬಿದ್ದಿದೆ. ಆದರೆ ಪಂಜಾಬ್ಗೆ ಬಾಕಿ ಇರುವ ಎರಡು ಪಂದ್ಯಗಳನ್ನು ಗೆದ್ದರೆ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆ ಇದೆ. ಅದಕ್ಕೂ ಇತರ ತಂಡಗಳ ರನ್ ರೇಟ್ ಗಣನೆಗೆ ಬರುತ್ತದೆ.
ಈ ಬಾರಿಯ ಐಪಿಎಲ್ ಪ್ಲೇ ಆಫ್ ಪ್ರವೇಶಕ್ಕೆ ಹೆಚ್ಚು ಸ್ಪರ್ಧೆ ಇರುವುದರಿಂದ ಪಂಜಾಬ್ ಇದು ಡು ಆರ್ ಡೈ ಪಂದ್ಯವಾಗಿದೆ. ಇಂದು ಡೆಲ್ಲಿ ವಿರುದ್ಧ ಪಂಜಾಬ್ ಸೋತಲ್ಲಿ ಲೀಗ್ನಿಂದ ಹೊರಬಿದ್ದ ಮೂರನೇ ತಂಡವಾಗಿರಲಿದೆ. ಸಧ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ 12 ಪಂದ್ಯದಲ್ಲಿ 8 ನ್ನು ಸೋತು ಕೇವಲ ನಾಲ್ಕು ಅಂಕದಿಂದ ಕ್ರಮವಾಗಿ 10 ಮತ್ತು 9 ನೇ ಸ್ಥಾನದಲ್ಲಿದ್ದು, ಲೀಗ್ನಿಂದ ಹೊರಬಿದ್ದಿವೆ. ಪಂಜಾಬ್ ಕಿಂಗ್ಸ್ 12 ಪಂದ್ಯದಲ್ಲಿ 6 ಗೆದ್ದು 12 ಅಂಕದಿಂದ 8 ನೇ ಸ್ಥಾನದಲ್ಲಿದೆ.
ಲೀಗ್ನಿಂದ ಹೊರಗುಳಿದಿರುವ ಡೆಲ್ಲಿಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿ ಅಥವಾ ಬೇಗ ಆಲ್ಔಟ್ ಮಾಡಿದಲ್ಲಿ ಪಂಜಾಬ್ ಉತ್ತಮ ರನ್ ರೇಟ್ನ ಜೊತೆಗೆ ಎರಡು ಅಂಕ ಪಡೆಯ ಬಹುದಾಗಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿಯೇ ಪಂಜಾಬ್ಗೆ ಎದುರಾಳಿಯಾಗಿತ್ತು. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಡೆಲ್ಲಿಯನ್ನು 31 ರನ್ನಿಂದ ಗೆದ್ದಿತ್ತು. ಈ ಸೋಲು ವಾರ್ನರ್ ಪಡೆಯನ್ನು ಪ್ಲೇ ಆಫ್ ರೇಸ್ನಿಂದ ಹೊರಹಾಕಿತ್ತು.
ಈ ಋತುವಿನಲ್ಲಿ, ಪಂಜಾಬ್ ಕಿಂಗ್ಸ್ ತಂಡದ ನಾಯಕ ತಂಡಕ್ಕಾಗಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಧವನ್ ಇದುವರೆಗೆ ತಂಡದ ಪರ ಆಡಿರುವ 9 ಪಂದ್ಯಗಳಲ್ಲಿ ಒಟ್ಟು 356 ರನ್ ಗಳಿಸಿದ್ದಾರೆ. ಇವರನ್ನು ಹೊರತುಪಡಿಸಿ ಉಳಿದ ಮೂವರು ಬ್ಯಾಟ್ಸ್‌ಮನ್‌ಗಳು ಮಾತ್ರ 200ಕ್ಕೂ ಹೆಚ್ಚು ರನ್ ಗಳಿಸಲು ಶಕ್ತರಾಗಿದ್ದಾರೆ. ಇದರಲ್ಲಿ ಸಿಮ್ರಾನ್ ಸಿಂಗ್ 334, ಜಿತೇಶ್ ಶರ್ಮಾ 265 ಮತ್ತು ಸ್ಯಾಮ್ ಕರಣ್ 216 ರನ್ ಗಳಿಸಿದ್ದಾರೆ.