ಕರ್ನಾಟಕ

karnataka

ETV Bharat / sports

ಪ್ಲೇಆಫ್​ ರೇಸಿಂದ ಹೊರಬಿದ್ದ ಪಂಜಾಬ್​​: ದೆಹಲಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಗೆಲುವು - ಶತಕ ತಪ್ಪಿಸಿಕೊಂಡ ಸ್ಟೋನ್

ಔಪಚಾರಿಕ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್​, ಪ್ಲೇಆಫ್​ ರೇಸ್​ನಲ್ಲಿದ್ದ ಪಂಜಾಬ್​ ಕಿಂಗ್ಸ್​ ಅನ್ನು ತನ್ನೊಂದಿಗೆ ಮುಳುಗಿಸಿತು. ಸೋತ ಪಂಜಾಬ್ ಪಾಯಿಂಟ್​ ಪಟ್ಟಿಯಲ್ಲಿ​ 8 ನೇ ಸ್ಥಾನಕ್ಕೆ ಕುಸಿಯಿತು.

ಪ್ಲೇಆಫ್​ ರೇಸಿಂದ ಪಂಜಾಬ್​ ಹೊರದಬ್ಬಿದ ಡೆಲ್ಲಿ
ಪ್ಲೇಆಫ್​ ರೇಸಿಂದ ಪಂಜಾಬ್​ ಹೊರದಬ್ಬಿದ ಡೆಲ್ಲಿ

By

Published : May 18, 2023, 7:06 AM IST

ಧರ್ಮಶಾಲಾ:ಪ್ಲೇಆಫ್​ಗೆ ಅರ್ಹತೆ ಪಡೆಯಲು ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಸೋಲು ಕಾಣುವ ಮೂಲಕ ರೇಸಿಂದ ಹೊರಬಿದ್ದಿತು. ಇತ್ತ ಈಗಾಗಲೇ ಟೂರ್ನಿಯಿಂದಲೇ ಔಟ್​ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್​ ಔಪಚಾರಿಕ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು, ಪಂಜಾಬ್​ಗೆ ಭಾರಿ ಶಾಕ್​ ನೀಡಿತು. ತನ್ನ ಜೊತೆಗೆ ಪಂಜಾಬ್​ ಅನ್ನು ಕೂಡಾ ಮುಳುಗಿಸಿತು.

ಬ್ಯಾಟಿಂಗ್‌ಸ್ನೇಹಿ ಪಿಚ್​​ನಲ್ಲಿ ಉಭಯ ತಂಡಗಳು ದೊಡ್ಡ ಮೊತ್ತ ದಾಖಲಿಸಿದವು. ಟಾಸ್​​ ಗೆದ್ದರೂ ಮೊದಲು ಡೆಲ್ಲಿಗೆ ಬ್ಯಾಟಿಂಗ್​ ಅವಕಾಶ ನೀಡಿ ಪಂಜಾಬ್​ ಆರಂಭದಲ್ಲೇ ಎಡವಟ್ಟು ಮಾಡಿಕೊಂಡಿತು. ಡ್ರೈ ಪಿಚ್​​ನ ಸಂಪೂರ್ಣ ಲಾಭ ಪಡೆದ ಡೆಲ್ಲಿ 2 ವಿಕೆಟ್​ಗೆ 213 ರನ್​ಗಳ ಬೃಹತ್​ ಮೊತ್ತ ಪೇರಿಸಿತು. ಲಿಯಾನ್​ ಲಿವಿಂಗ್​ಸ್ಟೋನ್​ ಏಕಾಂಗಿ ಹೋರಾಟ ನಡೆಸಿದಾಗ್ಯೂ ಪಂಜಾಬ್ 15 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಶತಕ ತಪ್ಪಿಸಿಕೊಂಡ ಸ್ಟೋನ್​:ಗೆಲುವು ಅನಿವಾರ್ಯವಾಗಿದ್ದ ಪಂಜಾಬ್​ಗೆ ಆಲ್​ರೌಂಡರ್​ ಲಿಯಾನ್​ ಲಿವಿಂಗ್​ಸ್ಟೋನ್​ ದೊಡ್ಡ ಬಲ ನೀಡಿದರು. ದೊಡ್ಡ ಮೊತ್ತ ಹೊರತಾಗಿಯೂ ಬಿಡುಬೀಸಾಗಿ ಬ್ಯಾಟ್​ ಮಾಡಿದ ಬ್ಯಾಟರ್​ ತಂಡದ ಗೆಲುವಿಗಾಗಿ ಕೊನೆಯವರೆಗೂ ಹೋರಾಡಿದರು. 94 ರನ್​ ಗಳಿಸಿ ಇನಿಂಗ್ಸ್​ನ ಕೊನೆಯ ಎಸೆತದಲ್ಲಿ ಲಿಯಾನ್​ ಔಟಾಗಿ, ಅದೃಷ್ಟವಿರದ ಕಾರಣ ಗೆಲುವು ಮತ್ತು ಶತಕದಿಂದ ತಪ್ಪಿಸಿಕೊಂಡರು.

ಪಂಜಾಬ್​ ಇನಿಂಗ್ಸ್​ ಆರಂಭ ಕೂಡ ಉತ್ತಮವಾಗಿರಲಿಲ್ಲ. ಮೊದಲ ಎಸೆತದಲ್ಲೇ ನಾಯಕ ಶಿಖರ್​ ಧವನ್​ ಸೊನ್ನೆ ಸುತ್ತಿದರು. ಪ್ರಭ್​ಶಿಮ್ರಾನ್​ ಸಿಂಗ್​ 22 ರನ್​ಗೆ ವಿಕೆಟ್​ ನೀಡಿದರು. ಇದು ತಂಡದ ರನ್​ಗೆ ಪೆಟ್ಟು ನೀಡಿತು. ಬಳಿಕ ಜೊತೆಯಾದ ಅಥರ್ವ್​ ಟಾಯ್ಡೆ, ಲಿಯಾನ್​ ಲಿವಿಂಗ್​ಸ್ಟೋನ್​ ಭರ್ಜರಿ ಇನಿಂಗ್ಸ್​ ಕಟ್ಟಿದರು. 78 ರನ್​ಗಳ ಜೊತೆಯಾಟದ ವೇಳೆ ಅಥರ್ವ್​ ಗಾಯಗೊಂಡು ನಿರ್ಗಮಿಸಿದರು. ಅದಾಗಲೇ ಬ್ಯಾಟರ್​ 55 ರನ್​ ಮಾಡಿದ್ದರು. ಬಳಿಕ ಯಾವೊಬ್ಬ ಬ್ಯಾಟರ್​ ರನ್​ ಗಳಿಸಲಿಲ್ಲ.

ಫಲ ನೀಡದ ಏಕಾಂಗಿ ಹೋರಾಟ:ಲಿಯಾನ್​ ಒಂದೆಡೆ ಅಬ್ಬರಿಸುತ್ತಿದ್ದರೆ, ಇತ್ತ ಉಳಿದ ಬ್ಯಾಟರ್​ಗಳು ನೆಲಕಚ್ಚಿದರು. ಜಿತೇಶ್​​ ಶರ್ಮಾ, ಶಾರೂಖ್​ ಖಾನ್​, ಸ್ಯಾಮ್​ ಕರ್ರನ್​, ಹರ್​ಪ್ರೀತ್​ ಬ್ರಾರ್​ ಎಲ್ಲರೂ ಒಂದಂಕಿ ಮಾತ್ರ ಗಳಿಸಿದರು. ಲಿಯಾನ್​ ಲಿವಿಂಗ್​ಸ್ಟೋನ್​ ಕೊನೆಯವರೆಗೂ ಏಕಾಂಗಿಯಾಗಿ ಹೋರಾಟ ನಡೆಸಿದರು. ಇಶಾಂತ್​ ಶರ್ಮಾ ಎಸೆದ ಕೊನೆಯ ಓವರ್​ನಲ್ಲಿ 34 ರನ್​ ಅಗತ್ಯವಿದ್ದಾಗ, 2 ಸಿಕ್ಸರ್​ 1 ಬೌಂಡರಿ ಬಾರಿಸಿದ ಸ್ಟೋನ್​ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದ್ದರು. ಬಳಿಕದ ಮೂರು ಎಸೆತಗಳಲ್ಲಿ ಒಂದೂ ರನ್​ ಬರದೇ ಲಿಯಾನ್​ ಔಟಾಗುವ ಮೂಲಕ 15 ರನ್​ಗಳಿಂದ ಸೋಲುವ ಮೂಲಕ ಪ್ಲೇಆಫ್​ ರೇಸ್​ನಿಂದ ಹೊರಬಿದ್ದಿತು.

ಡೆಲ್ಲಿ ಬ್ಯಾಟಿಂಗ್ ಖದರ್​:ಔಪಚಾರಿಕ ಪಂದ್ಯವಾಗಿದ್ದರೂ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಭರ್ಜರಿ ಪ್ರದರ್ಶನ ನೀಡಿತು. ಅದರಲ್ಲೂ ಮೊದಲ ನಾಲ್ವರು ಬ್ಯಾಟರ್​ಗಳೇ ಅಬ್ಬರಿಸಿ ತಂಡ 213 ರನ್​ ಗಳಿಸುವಂತೆ ಮಾಡಿದರು. ನಾಯಕ ವಾರ್ನರ್​ 46, ಹಲವು ದಿನಗಳ ಬಳಿಕ ತಂಡಕ್ಕೆ ವಾಪಸಾದ ಪೃಥ್ವಿ ಶಾ 54, ರನ್​ ಮಾಡಿ ಉತ್ತಮ ಆರಂಭ ನೀಡಿದರೆ, ರಿಲೇ ರೊಸ್ಸೌ ತಲಾ 6 ಬೌಂಡರಿ, ಸಿಕ್ಸರ್​ನಿಂದ ಔಟಾಗದೇ 82 ರನ್​ ಚಚ್ಚಿದರು. ಫಿಲ್​ ಸಾಲ್ಟ್​ 26 ರನ್​ ಗಳಿಸಿದರು.

ಇದನ್ನೂ ಓದಿ:ಗಾಯದ ನಡುವೆಯೂ ಆಡಿ ಪಂದ್ಯ ಗೆಲ್ಲಿಸಿದ ಕೃನಾಲ್: ಪಂದ್ಯದ ಮಹತ್ವ ಅರಿತ ನಾಯಕ

ABOUT THE AUTHOR

...view details