ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಂಡಾಗಿನಿಂದಲೂ ಕೋವಿಡ್ ಸೋಂಕಿನಿಂದಾಗಿ ತೊಂದರೆಗೊಳಗಾಗಿರುವ ಡೆಲ್ಲಿ ಕ್ಯಾಪಿಟಲ್ಸ್ಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ತೀವ್ರ ಜ್ವರದಿಂದ ಬಳಲುತ್ತಿರುವ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು ಪಂದ್ಯ ಆರಂಭಗೊಳ್ಳುವುದಕ್ಕಿಂತಲೂ ಮುಂಚೆ ತಂಡದ ನೆಟ್ ಬೌಲರ್ ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟ ಕಾರಣದಿಂದ ಎಲ್ಲ ಆಟಗಾರರನ್ನು ಐಸೋಲೇಷನ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಜ್ವರ ಕಾಣಿಸಿಕೊಂಡಿರುವ ಕಾರಣ ಪೃಥ್ವಿ ಶಾ ಆಸ್ಪತ್ರೆಗೆ ದಾಖಲಾಗಿದ್ದು, ಅವರ, ಕೋವಿಡ್ ವರದಿ ನೆಗೆಟಿವ್ ಬಂದಿದೆ.
ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್ ನೆಟ್ ಬೌಲರ್ಗೆ ಕೋವಿಡ್: ಆಟಗಾರರಿಗೆ ಐಸೋಲೇಷನ್!
ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮಾಹಿತಿ ಶೇರ್ ಮಾಡಿಕೊಂಡಿರುವ ಪೃಥ್ವಿ ಶಾ, ಸದ್ಯ ನಾನು ಆಸ್ಪತ್ರೆಗೆ ದಾಖಲಾಗಿದ್ದು, ಜ್ವರದಿಂದ ಚೇತರಿಸಿಕೊಳ್ಳುತ್ತಿದ್ದೇನೆ. ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು ಎಂದಿರುವ ಎಡಗೈ ಬ್ಯಾಟರ್, ಆದಷ್ಟು ಬೇಗ ಮೈದಾನಕ್ಕೆ ಮರಳುವ ಭರವಸೆ ನೀಡಿದ್ದಾರೆ.
ವಿಶೇಷ ಎಂದರೆ ಐಪಿಎಲ್ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಪೃಥ್ವಿ ಶಾ ಬೆಂಗಳೂರಿನಲ್ಲಿ ನಡೆದ ಯೋ-ಯೋ ಟೆಸ್ಟ್ನಲ್ಲಿ ಫೇಲ್ ಆಗಿದ್ದರು. ಇದರ ಹೊರತಾಗಿ ಕೂಡ ಅವರಿಗೆ ಐಪಿಎಲ್ನಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿತ್ತು. ನಿನ್ನೆ ಸಿಎಸ್ಕೆ ವಿರುದ್ಧ ನಡೆದ ಪಂದ್ಯದಲ್ಲೂ ಪೃಥ್ವಿ ಶಾ ಕಣಕ್ಕಿಳಿದಿರಲಿಲ್ಲ. ಈ ಪಂದ್ಯದಲ್ಲಿ ಡೆಲ್ಲಿ ತಂಡ ದಾಖಲೆಯ 91ರನ್ಗಳ ಅಂತರದಿಂದ ಸೋಲು ಕಂಡಿದೆ.