ನವದೆಹಲಿ:ಈ ಬಾರಿ ಐಪಿಎಲ್ನಲ್ಲಿ ಆಟಗಾರರು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಹೇಳಿದರು.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ವಿಕೆಟ್‌ಗಳ ಜಯ ಸಾಧಿಸಿ ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಸಿಎಸ್ಕೆ ಇದುವರೆಗೆ ತಮ್ಮ ಆರು ಪಂದ್ಯಗಳಲ್ಲಿ ಐದು ಪಂದ್ಯ ಗೆದ್ದು 10 ಅಂಕ ಸಂಪಾದಿಸಿದೆ.
ಕೇನ್ ವಿಲಿಯಮ್ಸನ್ (26*) ಮತ್ತು ಮನೀಶ್ ಪಾಂಡೆ (61) ಮತ್ತು ವಾರ್ನರ್ (57) ಅವರ ಅರ್ಧಶತಕಗಳ ನೆರವಿನಿಂದ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ಗಳನ್ನು ಕಳೆದುಕೊಂಡು 171 ರನ್ಗಳನ್ನು ಕಲೆ ಹಾಕಿತು. ಇದಕ್ಕೆ ಉತ್ತರಿಸಿದ ರುತುರಾಜ್ ಗಾಯಕ್ವಾಡ್ (75) ಮತ್ತು ಫಾಫ್ ಡು ಪ್ಲೆಸಿಸ್ (56) ಅವರ ಅರ್ಧಶತಕಗಳು ಮತ್ತು ಅದ್ಭುತ ಆಟದಿಂದಾಗಿ ಚೆನ್ನೈಗೆ ಭರ್ಜರಿ ಗೆಲುವು ದೊರೆಯಿತು.
ನಮ್ಮ ಬ್ಯಾಟಿಂಗ್ ಪ್ರದರ್ಶನವು ಅದ್ಭುತವಾಗಿತ್ತು. ಅವರಿಬ್ಬರ ಜೊತೆಯಾಟ ಬ್ರಿಲಿಯೆಂಟ್. ಆದರೆ ಬೌಲಿಂಗ್ ಉತ್ತಮವಾಗಿಲ್ಲ ಎಂದು ಇದರ ಅರ್ಥವಲ್ಲ. ನಿನ್ನೆ ದೆಹಲಿಯಲ್ಲಿ ಇಬ್ಬನಿ ಇರಲಿಲ್ಲ. ಈ ಕಾರಣಕ್ಕೆ ವಿಕೆಟ್ಗಳು ಉರುಳಲು ಸಾಧ್ಯವಾಗಲಿಲ್ಲ ಎಂದು ಧೋನಿ ಹೇಳಿದರು.
ಕಳೆದ ವರ್ಷ ನಾವು 5-6 ತಿಂಗಳುಗಳು ಕ್ರಿಕೆಟ್‌ನಿಂದ ಹೊರಗುಳಿದಿದ್ವಿ. ಅದು ಕಷ್ಟಕರವಾಗಿತ್ತು. ದೀರ್ಘವಾದ ಕ್ವಾರಂಟೈನ್ನಿಂದ ಸಾಕಷ್ಟು ಕಷ್ಟ ಅನುಭವಿಸಬೇಕಾಯಿತು. ಈ ವರ್ಷ ಆಟಗಾರರು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಕಳೆದ 8-10 ವರ್ಷಗಳಿಂದ ನಾವು ತಂಡದಿಂದ ಆಟಗಾರರನ್ನು ಬದಲಾಯಿಸಿಲ್ಲ. ಅವಕಾಶ ಸಿಗದ ಆಟಗಾರರನ್ನೂ ನಾವು ಪ್ರಶಂಸಿಸುತ್ತೇವೆ. ನಿಮಗೆ ಅವಕಾಶ ಸಿಕ್ಕಾಗ ನೀವು ಸಿದ್ಧರಾಗಿರಬೇಕು. ಡ್ರೆಸ್ಸಿಂಗ್ ರೂಂನ ವಾತಾವರಣ ಹದಗೆಡದಂತೆ ಕಾಯ್ದುಕೊಳ್ಳುವುದು ಮುಖ್ಯ ಎಂದು ಧೋನಿ ಅಭಿಪ್ರಾಯಪಟ್ಟರು.
ಚೆನ್ನೈನ ಮುಂದಿನ ಪಂದ್ಯ ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದೆ.