ಕರ್ನಾಟಕ

karnataka

ETV Bharat / sports

IPLಗಿಂದು 16 ವರ್ಷ: ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯ ನೆನಪಿದೆಯೇ ನಿಮಗೆ? - ETV Bharath Kannada news

ಐಪಿಎಲ್​ಗೆ ಇಂದು 16 ವರ್ಷ ತುಂಬಿದೆ. ಯಶಸ್ವಿ ಮಿಲಿಯನ್​ ಡಾಲರ್​ ಟೂರ್ನಿಯ ಮೊದಲ ಪಂದ್ಯ ಹೇಗಿತ್ತು ಗೊತ್ತೇ?

Etv Bharat
Etv Bharat

By

Published : Apr 18, 2023, 8:18 PM IST

ಇಂಡಿಯನ್​ ಪ್ರೀಮಿಯರ್​ ಲೀಗ್(ಐಪಿಎಲ್‌)​ ಇಂದು ಮಿಲಿಯನ್​ ಡಾಲರ್​ ಟೂರ್ನಿಯಾಗಿದೆ. ಆದರೆ, 18ನೇ ಏಪ್ರಿಲ್ 2008 ರಂದು ಆರಂಭವಾದ ಈ ಲೀಗ್​ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತದೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಇಂದು ಟೂರ್ನಿ ಅಂಥದ್ದೊಂದು ಯಶಸ್ಸಿನ ಮಟ್ಟವನ್ನು ತಲುಪಿದೆ.

ಐಪಿಎಲ್‌ ಟೂರ್ನಿಯು ಭಾರತೀಯ ಕ್ರಿಕೆಟ್​ ಮಂಡಳಿಯನ್ನು ಜಗತ್ತಿನಲ್ಲೇ ಅತ್ಯಂತ ಶ್ರೀಮಂತವಾಗಿಸಿದೆ. ಅಂದು ಬಿಸಿಸಿಐ ಉಪಾಧ್ಯಕ್ಷರಾಗಿದ್ದ ಲಲಿತ್ ಮೋದಿ ಕನಸಿನ ಕೂಸು ಇಂದು 16ನೇ ವರ್ಷ ಪ್ರವೇಶಿಸಿದೆ. ಐಪಿಎಲ್ ಪ್ರತಿ ಭಾರತೀಯ ಕ್ರಿಕೆಟ್ ಅಭಿಮಾನಿಯನ್ನು ಆಶ್ಚರ್ಯಚಕಿತಗೊಳಿಸಿದೆ. ಇಂದು ಈ ಲೀಗ್​ ನಡೆಯುವಾಗ ಜಗತ್ತಿನಲ್ಲೆಲ್ಲೂ ಯಾವುದೇ ಮಹತ್ವದ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳು ಆಯೋಜನೆಗೊಳ್ಳದ ಮಟ್ಟಿಗೆ ಅತ್ಯಂತ ಪ್ರಭಾವಿಯಾಗಿ ಬೆಳೆದು ನಿಂತಿದೆ.

2008 ರಂದು ಬಿಸಿಸಿಐ ಐಪಿಎಲ್​ ಎಂಬ ಲೀಗ್ ಅ​ನ್ನು ಹುಟ್ಟುಹಾಕಿತು. 16 ವರ್ಷಗಳ ಕೆಳಗೆ ಆರಂಭವಾದ ಲೀಗ್​ ಈಗ ವಿಶ್ವದ ಅತ್ಯುತ್ತಮ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಒಂದು. ಅಂದು ಭರ್ಜರಿ ಉದ್ಘಾಟನಾ ಕಾರ್ಯಕ್ರಮದ ನಂತರ ಲೀಗ್​ನ ಮೊದಲ ಪಂದ್ಯದಲ್ಲಿ ಸೌರವ್​ ಗಂಗೂಲಿ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ದಿ ವಾಲ್​ ಎಂದೇ ಕರೆಯಲಾಗುವ ರಾಹುಲ್​ ದ್ರಾವಿಡ್​ ಅವರ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು.

ಚೊಚ್ಚಲ ಪಂದ್ಯವೇ ಅತ್ಯಂತ ಮನರಂಜನೆಯ ಆಟವಾಗಿಯೇ ಮಾರ್ಪಟ್ಟಿತ್ತು. ಕೆಕೆಆರ್‌ನ ಬ್ರೆಂಡನ್ ಮೆಕಲಮ್(158) ಮೊದಲ ಇನ್ನಿಂಗ್ಸ್‌ನಲ್ಲಿಯೇ ಸೊಗಸಾದ ಶತಕದಾಟ ಪ್ರದರ್ಶಿಸಿದ್ದರು. ಆ ಮೂಲಕ ಅವರು ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದ್ದರು. ಕೆಕೆಆರ್​ 222 ರನ್‌ಗಳ ಬೃಹತ್​ ಇನ್ನಿಂಗ್ಸ್​ ಕಟ್ಟಿತ್ತು. ಇದನ್ನು ಬೆನ್ನತ್ತಿದ್ದ ಆರ್​ಸಿಬಿ 82 ರನ್​ಗಳಿಗೆ ಸರ್ವಪತನ ಕಂಡು ತವರಿನ ಮೊದಲ ಪಂದ್ಯದಲ್ಲೇ 140 ರನ್​ಗಳಿಂದ ಹೀನಾಯ ಸೋಲು ಅನುಭವಿಸಿತ್ತು. ಅಜಿತ್ ಅಗರ್ಕರ್ ಮೂರು ಮತ್ತು ಗಂಗೂಲಿ, ಅಶೋಕ್​ ದಿಂಡ ಎರಡು ವಿಕೆಟ್​ ಪಡೆದು ಮಿಂಚಿದ್ದರು.

ಐಪಿಎಲ್​​ ಪ್ರಸ್ತುತ ತನ್ನ 16 ನೇ ಋತುವಿನಲ್ಲಿದೆ. 10 ತಂಡಗಳಲ್ಲಿ ಆಡಿಸಲಾಗುತ್ತಿದೆ. 15 ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ, ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಚಾಂಪಿಯನ್‌ಶಿಪ್ ಗೆದ್ದಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಎರಡು, ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಕ್ಕನ್ ಚಾರ್ಜರ್ಸ್ ಒಮ್ಮೆ ಕಪ್ ಎತ್ತಿ ಹಿಡಿದಿವೆ. ರಾಜಸ್ಥಾನ್ ರಾಯಲ್ಸ್ ಚೊಚ್ಚಲ ಐಪಿಎಲ್​ನ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಗುಜರಾತ್ ಟೈಟಾನ್ಸ್ 2022 ರಲ್ಲಿ ತಮ್ಮ ಮೊದಲ ಋತುವಿನಲ್ಲಿ ಕಪ್‌ ಗೆದ್ದುಕೊಂಡಿತು.

ಬೆಟ್ಟಿಂಗ್​ ಕಳಂಕ:16 ವರ್ಷ ಕಳೆದ ಲೀಗ್​ಗೆ ಕಳಂಕವೂ ತಟ್ಟಿದೆ. 2013 ಐಪಿಎಲ್​ ಪಂದ್ಯದ ವೇಳೆ ಬೆಟ್ಟಿಂಗ್​ ದಂದೆಯಲ್ಲಿ ರಾಜಸ್ಥಾನ್ ರಾಯಲ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಭಾಗಿಯಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜುಲೈ 2015 ರಲ್ಲಿ, ಭಾರತದ ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧಾ ನೇತೃತ್ವದ ಮೂವರು ಸದಸ್ಯರ ಸಮಿತಿ ನೇಮಿಸಿತ್ತು.

ನ್ಯಾ.ಲೋಧಾ ಸಮಿತಿಯ ತನಿಖೆಯ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್‌ಗೆ 2 ವರ್ಷ (2016 ಮತ್ತು 2017) ನಿಷೇಧ ಶಿಕ್ಷೆ ನೀಡಲಾಗಿತ್ತು. ರಾಜಸ್ಥಾನ ರಾಯಲ್ಸ್‌ನ ರಾಜ್ ಕುಂದ್ರಾ ಮತ್ತು ಸಿಎಸ್‌ಕೆಯ ಗುರುನಾಥ್ ಮೇಯಪ್ಪನ್ ಅವರ ಮೇಲೆ ಬಿಸಿಸಿಐ ನಡೆಸುವ ಯಾವುದೇ ಕ್ರಿಕೆಟ್ ಪಂದ್ಯಗಳಲ್ಲಿಯೂ ಪಾಲುದಾರಿಕೆ ಹೊಂದದಂತೆ ಆಜೀವ ನಿಷೇಧ ಹೇರಲಾಯಿತು.

ಇದನ್ನೂ ಓದಿ:SRH vs MI : ಟಾಸ್​ ಗೆದ್ದು ಕ್ಷೇತ್ರ ರಕ್ಷಣೆಗೆ ಮುಂದಾದ ಐಡೆನ್ ಮಾರ್ಕ್ರಾಮ್

ABOUT THE AUTHOR

...view details