ಹೈದರಾಬಾದ್: ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಟೀಂ ಇಂಡಿಯಾ ಘೋಷಣೆಯಾಗಿದ್ದು, ಬರೋಬ್ಬರಿ 3 ವರ್ಷಗಳ ನಂತರ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅತ್ಯುತ್ತಮ ಪ್ರದರ್ಶನದ ಹೊರತಾಗಿ ಕೂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಬ್ಯಾಟರ್ ನಿತೀಶ್ ರಾಣಾ ಅವಕಾಶ ವಂಚಿತರಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ, ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಸ್ಟಾರ್ ಬ್ಯಾಟರ್ ನಿತೀಶ್ ರಾಣಾ ಅವಕಾಶ ಪಡೆದುಕೊಳ್ಳಲಿದ್ದಾರೆ ಎಂದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ, ಅವರಿಗೆ ಬಿಸಿಸಿಐ ಮಣೆ ಹಾಕದೇ ಸ್ಫೋಟಕ ಬ್ಯಾಟರ್ ದಿನೇಶ್ ಕಾರ್ತಿಕ್ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾಗೆ ಅವಕಾಶ ನೀಡಿದೆ. ಹೀಗಾಗಿ, ಮನನೊಂದಿರುವ ರಾಣಾ, ಶೀಘ್ರದಲ್ಲೇ ಕೆಲ ಬದಲಾವಣೆ (Things will change soon) ಎಂದು ಬರೆದುಕೊಂಡಿದ್ದಾರೆ.
ಟೀಂ ಇಂಡಿಯಾ ಪರ ಕಳೆದ ವರ್ಷ ಶ್ರೀಲಂಕಾದಲ್ಲಿ ನಡೆದ ಟಿ-20 ಸರಣಿಯಲ್ಲಿ ಆಡಿದ್ದ ರಾಣಾ ಇದೀಗ ಅವಕಾಶ ವಂಚಿತರಾಗಿದ್ದಾರೆ. ಹೀಗಾಗಿ, ಇದೇ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ನಲ್ಲಿ ಚಾನ್ಸ್ ಪಡೆದುಕೊಳ್ಳುವುದು ಬಹುತೇಕ ಅನುಮಾನವಾಗಿದೆ. ಹೀಗಾಗಿ, ರಾಣಾ ನಿರಾಸೆಗೊಂಡಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಕೆಕೆಆರ್ ಪರ ಆಡಿರುವ ನಿತೀಶ್ ರಾಣಾ 14 ಪಂದ್ಯಗಳಿಂದ 361ರನ್ಗಳಿಕೆ ಮಾಡಿದ್ದು, ಕೆಲವೊಂದು ಪಂದ್ಯಗಳಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.