ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಅವರ ನಡುವಿನ ಮೈದಾನದ ಜಗಳ ಸಾಮಾಜಿಕ ಜಾಲತಾಣದಲ್ಲಿ ಮುಂದುವರೆದಿದೆ. ಕ್ರಿಯೆ ಪ್ರತಿಕ್ರಿಯೆ ಎಂಬಂತೆ ಒಬ್ಬರಿಗೊಬ್ಬರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಕೆಣಕುತ್ತಿದ್ದಾರೆ. ನಿನ್ನೆ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟ್ ಆಗಿದ್ದಕ್ಕೆ ವ್ಯಂಗ್ಯವಾಗಿ ನವೀನ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿಕೊಂಡು ಕಾಲೆಳೆದಿದ್ದಾರೆ. ಅದು ಮಾತ್ರವಲ್ಲದೇ ಮ್ಯಾಚ್ ಸೋತಾಗಲೂ ಮತ್ತೊಂದು ಸ್ಟೋರಿ ಹಾಕಿಕೊಂಡಿದ್ದಾರೆ.
ನವೀನ್ ಉಲ್ ಹಕ್ ಅವರ ಸ್ಟೋರಿಗೆ ವಿರಾಟ್ ಕೂಡಾ ಪ್ರತಿಕ್ರಿಯೆ ನೀಡಿರುವುದು ಕುತೂಹಲವಾಗಿದೆ. ವಿರಾಟ್ ಅವರ ಸ್ವಭಾವವೇ ಹಾಗೇ ಯಾರೇ ಏನೇ ಹೇಳಿದರು ಅವರು ತಿರುಗಿ ಉತ್ತರಿಸುತ್ತಿರುತ್ತಾರೆ. ಇದಕ್ಕೆ ಲಕ್ನೋ ವಿರುದ್ಧದ ಪಂದ್ಯ ಒಂದು ರೀತಿಯ ಉದಾಹರಣೆ. ಇದಕ್ಕೂ ಮುನ್ನ ಬಹಳಷ್ಟು ಬಾರಿ ವಿರಾಟ್ ಅವರು ಈ ರೀತಿ ಏಟಿಗೆ ಎದಿರೇಟು ನೀಡಿದ್ದರು. ಈಗ ನವೀನ್ ಸ್ಟೋರಿಗೆ ನೀನು ನನಗೆ ಸ್ಪರ್ಧಿಯೇ ಅಲ್ಲ ಎಂದು ವಿರಾಟ್ ಕೊಹ್ಲಿ ಪಂಚ್ ಕೊಟ್ಟಿದ್ದಾರೆ.
ನಿನ್ನೆ (ಮೇ 9) ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿದಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಬಂದ ಆರ್ಸಿಬಿ ತನ್ನ ಪ್ರಥಮ ವಿಕೆಟ್ ಅನ್ನು ಬೇಗ ಕಳೆದುಕೊಂಡಿತು. ವಿರಾಟ್ ಕೊಹ್ಲಿ ಮತ್ತು ಫಾಫ್ ಈ ಆವೃತ್ತಿಯಲ್ಲಿ ತಂಡಕ್ಕೆ ಉತ್ತಮ ಜೊತೆಯಾಟದ ಆರಂಭ ನೀಡುತ್ತಿದ್ದರು. ಆದರೆ ವಿರಾಟ್ 4 ಎಸೆತಗಳಲ್ಲಿ 1 ರನ್ ಗಳಿಸಿ ಔಟ್ ಆದರು. ಈ ವಿಕೆಟ್ ಬೀಳುತ್ತಿದ್ದಂತೆ ನವೀನ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಟಿವಿಯ ಜೊತೆಗೆ ಮಾವಿನ ಹಣ್ಣಿನ ಫೋಟೋ ಹಾಕಿ 'ಸಿಹಿ ಮಾವಿನ ಹಣ್ಣುಗಳು’ ಎಂದು ಬರೆದುಕೊಂಡಿದ್ದರು.
ಮುಂಬೈ ಬ್ಯಾಟಿಂಗ್ಗೆ ಬಂದಾಗ ವಿಕೆಟ್ ಮೊದಲು ವಿಕೆಟ್ ನಷ್ಟ ಅನುಭವಿಸಿದರೂ ನಂತರ ಸೂರ್ಯ ಕುಮಾರ್ ಯಾದವ್ ಮತ್ತು ವಧೇರಾ ಅಬ್ಬರದ ಬ್ಯಾಟಿಂಗ್ನಿಂದ ಆರ್ಸಿಬಿಯ ಬಳಿ ಇದ್ದ ಪಂದ್ಯ ಮುಂಬೈಗೆ ತಿರುಗಿತ್ತು. ಇವರುಗಳ ಬ್ಯಾಟಿಂಗ್ ಸಹಾಯದಿಂದ ಮುಂಬೈ 21 ಬಾಲ್ ಉಳಿಸಿಕೊಂಡು ಗೆಲುವು ದಾಖಲಿಸಿತ್ತು.