ವಿರಾಟ್ ಕೊಹ್ಲಿ ಅಬ್ಬರದ ಶತಕದ ನೆರವಿನಿಂದ ಗುರುವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ ಅಂತರದಿಂದ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್ ಆಸೆ ಜೀವಂತವಾಗಿದೆ. ಕೊಹ್ಲಿ ಶತಕ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಬಿರುಸಿದ ಅರ್ಧಶತಕದ ನೆರವಿನಿಂದ ಆರ್ಸಿಬಿ ನಿರ್ಣಾಯಕ ಪಂದ್ಯದಲ್ಲಿ ಸುಲಭ ಜಯ ದಾಖಲಿಸಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಗೆಲುವಿನ ಬೆನ್ನಲ್ಲೇ ಲಕ್ನೋ ತಂಡದ ಆಟಗಾರ ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್-ಉಲ್-ಹಕ್ ಮತ್ತು ಮೆಂಟರ್ ಗೌತಮ್ ಗಂಭೀರ್ ಭಾರಿ ಟ್ರೋಲ್ಗೆ ಗುರಿಯಾಗಿದ್ದಾರೆ.
ಕೆಲದಿನಗಳ ಹಿಂದೆ, ಮೇ 1ರಂದು ಲಕ್ನೋ ವಿರುದ್ಧದ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ವಾಗ್ವಾದ ನಡೆದಿತ್ತು. ಅಲ್ಲದೆ ಪಂದ್ಯದ ವೇಳೆಯೂ ಮೈದಾನದಲ್ಲಿ ವಿರಾಟ್ ಹಾಗೂ ನವೀನ್-ಉಲ್-ಹಕ್ ಮಾತಿನ ಚಕಮಕಿ ನಡೆಸಿದ್ದರು. ಇದಾದ ಬಳಿಕ ಎಲ್ಲ ಮೂವರೂ ಆಟಗಾರರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿತ್ತು. ಈ ಪಂದ್ಯದುದ್ದಕ್ಕೂ ಮೈದಾನದಲ್ಲಿ ಅಬ್ಬರದ ಸಂಭ್ರಮಾಚರಣೆ ತೋರಿದ್ದ ಕೊಹ್ಲಿ ಲಕ್ನೋ ಮೈದಾನದ ಕೇಂದ್ರಬಿಂದುವಾಗಿದ್ದರು.
ಈ ಪಂದ್ಯದ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧದ ಆರ್ಸಿಬಿ ಸೋಲು ಅನುಭವಿಸಿತ್ತು. ಇದರ ಬೆನ್ನಲ್ಲೇ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದರ ಮೂಲಕ ಗಮನ ಸೆಳೆದಿದ್ದ ನವೀನ್-ಉಲ್-ಹಕ್ ಪರೋಕ್ಷವಾಗಿ ಕೊಹ್ಲಿ ಹಾಗೂ ಆರ್ಸಿಬಿ ಅಭಿಮಾನಿಗಳ ಕಾಲೆಳೆದಿದ್ದರು. ಆರ್ಸಿಬಿ ಹಾಗೂ ಮುಂಬೈ ಪಂದ್ಯ ನಡೆಯುತ್ತಿದ್ದ ಟಿವಿ ಪರದೆಯ ಮುಂದೆ ಮಾವಿನ ಹಣ್ಣುಗಳನ್ನು ಇಟ್ಟ ಫೋಟೊ ಹಂಚಿಕೊಂಡಿದ್ದ ಹಕ್, "ಸಿಹಿ ಮಾವಿನ ಹಣ್ಣುಗಳು" ಎಂದು ಬರೆದುಕೊಂಡಿದ್ದರು. ವಿರಾಟ್ ಕೊಹ್ಲಿ (1) ಔಟಾಗಿರುವ ದೃಶ್ಯ ಟಿವಿಯಲ್ಲಿ ಸೆರೆಯಾಗಿರುವುದು ಗಮನಿಸಬೇಕಾದ ಸಂಗತಿ.
ಇದನ್ನೇ ಗುರಿಯಾಗಿಸಿಕೊಂಡಂತಿರುವ ಆರ್ಸಿಬಿ ಅಭಿಮಾನಿಗಳು ನಿನ್ನೆ ಹೈದರಾಬಾದ್ ವಿರುದ್ಧ ಬೆಂಗಳೂರು ಗೆಲುವು ಸಾಧಿಸುತ್ತಿದ್ದಂತೆ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಮಾಡಿದ್ದಾರೆ. ತರಹೇವಾರಿ ಮೀಮ್ಸ್ಗಳ ಮೂಲಕ ಟ್ವೀಟ್ಗಳೊಂದಿಗೆ ಗಂಭೀರ್ ಹಾಗೂ ನವೀನ್-ಉಲ್-ಹಕ್ ಕಾಲೆಳೆದಿದ್ದಾರೆ.