ಅಹಮದಾಬಾದ್ (ಗುಜರಾತ್):ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಐಪಿಎಲ್ ಎಂಬ ಮಹಾ ಕ್ರಿಕೆಟ್ ಮನಂಜನೆಗೆ ಇಂದು ಅದ್ಧೂರಿ ತೆರೆ ಬೀಳಲಿದೆ. ಈ ಪಂದ್ಯಕ್ಕಾಗಿ ವಿಶ್ವದ ಅತಿ ದೊಡ್ಡ ಕ್ರೀಡಾಂಗಣವಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರೀಡಾ ಸಂಕೀರ್ಣದ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜಾಗಿದೆ. 16ನೇ ಆವೃತ್ತಿಯ ಫೈನಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗುತ್ತಿವೆ.
58 ದಿನಗಳ ಕಾಲ 73 ಪಂದ್ಯಗಳು 12 ಕ್ರೀಡಾಂಗಣಗಳಲ್ಲಿ ನಡೆದಿವೆ. ಮೊದಲ ಪಂದ್ಯ ಆರಂಭವಾದ ಜಾಗದಲ್ಲೇ ಕಾಕತಾಳೀಯವೆಂಬಂತೆ ಅದೇ ತಂಡಗಳ ನಡುವಣ ಫೈನಲ್ ಹೋರಾಟದೊಂದಿಗೆ ಟೂರ್ನಿ ಮುಕ್ತಾಯವಾಗಲಿದೆ. ಅತೀ ಹೆಚ್ಚು ಪ್ರೇಕ್ಷಕರು ಕುಳಿತು ನೋಡಬಹುದಾದ ಈ ಕ್ರೀಡಾಂಗಣವನ್ನು 1000 ಕ್ಕೂ ವಿಶೇಷ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಇಂದು ಬೃಹತ್ ಮೈದಾನ ನಾನಾ ಬಣ್ಣಗಳ ವಿದ್ಯುತ್ ದೀಪದಿಂದ ಪ್ರಜ್ವಲಿಸುತ್ತಿದೆ.
ಮಹಾ ಮನರಂಜನೆಯನ್ನು ಮನೆಯಲ್ಲಿರುವ ಟಿವಿ ಮತ್ತು ಅಲ್ಲಲ್ಲಿ ಮೊಬೈಲ್ನಲ್ಲಿ ನೋಡುವವರಿಗೆ ಅಚ್ಚುಕಟ್ಟಾಗಿ ತಲುಪಿಸಲು ಹಲವಾರು ಕ್ಯಾಮರಾ ಕಣ್ಣುಗಳು ಕಾರ್ಯನಿರ್ವಹಿಸಲಿದೆ. ನಾನಾ ಆಯಾಮಗಳಲ್ಲಿ ಈ ಕ್ಯಾಮರಾಗಳು ದೃಶ್ಯಗಳನ್ನು ಸೆರೆಹಿಡಿಯಲಿವೆ. ಮೈದಾನದಲ್ಲಿ ಪಂದ್ಯ ವೀಕ್ಷಣೆಗೆ ತೆರಳಿದ ಅಭಿಮಾನಿಗಳಿಗಿಂತ ಹೆಚ್ಚು ಜನರು ನೇರ ಪ್ರಸಾರವನ್ನು ತಾವಿದ್ದಲ್ಲಿಂದಲೇ ಅನುಭವಿಸಲಿದ್ದಾರೆ.
ಈ ಬಗ್ಗೆ ಐಪಿಎಲ್ ಪ್ರಸಾರ ನಿರ್ದೇಶಕ ದೇವ್ ಶ್ರೇಯಾನ್ ಮಾತನಾಡಿ, "ಪಂದ್ಯವನ್ನು ಸೆರೆಹಿಡಿಯಲು 50 ಕ್ಯಾಮರಾಗಳನ್ನು ಬಳಸುತ್ತಿದ್ದೇವೆ. ಇದರಲ್ಲಿ 28 ವ್ಯಕ್ತಗತವಾಗಿ ನಿರ್ವಹಣೆ ಮಾಡಲಾಗುತ್ತದೆ. 6 ಸೂಪರ್ ಮೋಷನ್, 3 ಅಲ್ಟ್ರಾ ಮೋಷನ್ ಕ್ಯಾಮರಾಗಳನ್ನು ಬಳಸುತ್ತಾರೆ. ಇದಲ್ಲದೇ ಸ್ಪೈಡರ್ ಕ್ಯಾಮ್, ಎರಡು ಡ್ರೋನ್ ಅದಲ್ಲದೇ ಎರಡು ಸ್ವಯಂಚಾಲಿತ ಎರಡು ಕ್ಯಾಮರಾಗಳನ್ನು ವಿಶೇಷವಾಗಿ ಬಳಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.