ಮುಂಬೈ:ನಿನ್ನೆ ನಡೆದ ಐಪಿಎಲ್ನ ಎರಡು ಪಂದ್ಯಗಳಲ್ಲಿ 20ನೇ ಓವರ್ ಮ್ಯಾಚ್ ಡಿಸೈಡರ್ ಆಯಿತು. ಅತ್ತ ಗುಜರಾತ್ ಮತ್ತ ಲಕ್ನೋ ಪಂದ್ಯದಲ್ಲಿ ಮೋಹಿತ್ ಶರ್ಮಾ ಅವರ ಓವರ್ನಲ್ಲಿ 4 ವಿಕೆಟ್ ಬಿದ್ದು ಪಂದ್ಯ ಸಂಪೂರ್ಣ ಗುಜರಾತ್ ಟೈಟಾನ್ಸ್ (ಜಿಟಿ) ಪರ ಆಯಿತು. ರಾತ್ರಿ ನಡೆದ ಮುಂಬೈ ಮತ್ತು ಪಂಜಾಬ್ ಪಂದ್ಯದಲ್ಲೂ ಅರ್ಷದೀಪ್ ಸಿಂಗ್ ಅವರ ಕೊನೆಯ ಓವರ್ನಲ್ಲಿ ಎರಡು ವಿಕೆಟ್ ಬಿದ್ದು, ಪಂಜಾಬ್ ಕಿಂಗ್ಸ್ಗೆ 13 ರನ್ ಗೆಲುವು ದೊರಕಿತು.
ಪಂದ್ಯದ ನಂತರ ಪಂಜಾಬ್ ಕಿಂಗ್ಸ್ ಟ್ವಿಟರ್ನಲ್ಲಿ ಹಾಕಿದ ಪೋಸ್ಟ್ವೊಂದಕ್ಕೆ ಮುಂಬೈ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಪಂಜಾಬ್ ಪಾಳಯ ಗೆಲುವಿನಲ್ಲಿ ಮುಂಬೈ ಇಂಡಿಯನ್ಸ್ನ ಕಾಲೆಳೆದಿದೆ. ಅಲ್ಲದೇ ಪೊಲೀಸರಿಗೆ ಅರ್ಷದೀಪ್ ವಿರುದ್ಧವೇ ದೂರು ನೀಡಿದೆ. ಆದರೆ ಪೊಲೀಸರು ಈ ದೂರನ್ನು ನಿರಾಕರಿಸಿದ್ದಾರೆ.
ಮುಂಬೈ ಇಂಡಿಯನ್ಸ್ಗೆ ನಿನ್ನೆ ಕೊನೆಯ ಓವರ್ನಲ್ಲಿ 16 ರನ್ ಅವಶ್ಯಕತೆ ಇತ್ತು ಬೌಲಿಂಗ್ಗೆ ಅರ್ಷದೀಪ್ ಸಿಂಗ್ ಅವರನ್ನು ಸ್ಯಾಮ್ ಕರನ್ ಕಳಿಸುತ್ತಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಡೆತ್ ಓವರ್ ಮಾಡಿದ ಅನುಭವ ಇರುವ ಅರ್ಷದೀಪ್ ಕೊನೆಯ ಓವರ್ನ್ನು ಚಾಕಚಕ್ಯತೆಯಿಂದ ನಿರ್ವಹಿಸಿದರು.
20ನೇ ಓವರ್ನ ಒಂದನೇ ಬಾಲ್ನ್ನು ಟಿಮ್ ಡೇವಿಡ್ ಎದುರಿಸಿ ಒಂದು ರನ್ ಪಡೆದುಕೊಂಡರು. ಕ್ರೀಸ್ಗೆ ಬಂದು ಬಹಳಾ ಹೊತ್ತು ಆಡಿ 25 ರನ್ ಗಳಿಸಿದ್ದ ಡೇವಿಡ್, ಆಗತಾನೆ ಬಂದು ಒಂದು ಬಾಲ್ ಆಡಿದ್ದ ತಿಲಕ್ ವರ್ಮಾಗೆ ಕ್ರೀಸ್ ಬಿಟ್ಟುಕೊಟ್ಟರು. ಎರಡನೇ ಬಾಲ್ನಲ್ಲಿ ಕರಾರುವಕ್ಕಾದ ಯಾರ್ಕರ್ ಬಾಲ್ ಮಾಡಿದ ಅರ್ಷದೀಪ್ ಸಿಂಗ್ ವಿಕೆಟನ್ನು ಮುರಿದು ಹಾಕಿದರು. ತಿಲಕ್ ವರ್ಮಾ ಪೆವಿಲಿಯನ್ ಹಾದಿ ಹಿಡಿದರೆ, ನಂತರ ಪ್ರಭಾವಿ ಆಟಗಾರನ ಸ್ಥಾನದಲ್ಲಿ ಬಂದ ವಧೇರಾ ಸಹ ಕ್ಲೀನ್ ಬೌಲ್ಡ್ ಆದರು. ಈ ವಿಕೆಟ್ ಸಹ ಕಟ್ ಆಗಿತ್ತು. ಕೊನೆಯ ಓವರ್ನಲ್ಲಿ ಕೇವಲ ಎರಡು ರನ್ ಗಳಿಸಿ ಎರಡು ವಿಕೆಟ್ ಕೊಟ್ಟು 13 ರನ್ನ ಸೋಲನುಭವಿಸಿತು.
ಕೊನೆಯ ಓವರ್ನಲ್ಲಿ ಎರಡು ವಿಕೆಟ್ಗಳು ಕಟ್ ಆಗಿದ್ದವು. ಈ ಬಗ್ಗೆ ಪಂಜಾಬ್ ಕಿಂಗ್ಸ್ ಟ್ವಿಟರ್ನಲ್ಲಿ,"ಹೇ ಮುಂಬೈ ಪೋಲೀಸ್, ನಾವು ಅಪರಾಧವನ್ನು ವರದಿ ಮಾಡಲು ಬಯಸುತ್ತೇವೆ". ಎಂದು ಬರೆದುಕೊಂಡಿತ್ತು. ಇದನ್ನು ಮುಂಬೈ ಪೊಲೀಸ್ರ ಟ್ವಿಟರ್ ಹ್ಯಾಂಡಲ್ಗೆ ಟ್ಯಾಗ್ ಸಹ ಮಾಡಲಾಗಿತ್ತು. ಅದಕ್ಕೆ ಮುಂಬೈ ಪೊಲೀಸರು ಸಹ ಪ್ರತಿಕ್ರಿಯೆ ನೀಡಿದ್ದು, "ಕಾನೂನು ಉಲ್ಲಂಘನೆಯ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ, ಸ್ಟಂಪ್‌ಗಳಲ್ಲ!" ಎಂದು ರೀಟ್ವಿಟ್ ಮಾಡಿತ್ತು.
ಪಂಜಾಬ್ ಕಿಂಗ್ಸ್ ತಂಡ ವಿಕೆಟ್ ಮುರಿದ ಅರ್ಷದೀಪ್ ಮೇಲೆಯೇ ದೂರು ದಾಖಲಿಸಲು ಮುಂದಾದ ಹಾಸ್ಯಾಸ್ಪದ ಟ್ವಿಟ್ಗೆ ನಾನಾ ರೀತಿಯ ಕಮೆಂಟ್ಗಳು ಹರಿದು ಬರುತ್ತಿವೆ. ಮುಂಬೈ ಪೊಲೀಸರು ಸಹ ತುಂಬಾ ಜಾಣ್ಮೆಯ ಉತ್ತರ ನೀಡಿರುವುದು ಗಮನಾರ್ಹವಾಗಿದೆ. ಅಭಿಮಾನಿಗಳಿಗಂತೂ ಕೊನೆಯ ಓವರ್ನ ಟ್ವಿಸ್ಟ್ ಮೆಚ್ಚುಗೆಯಾಗಿದೆ. ಐಪಿಎಲ್ನ ಕ್ರೇಜ್ ಹೆಚ್ಚಾಗಲು ಇಂತಹ ಕ್ಷಣಗಳೇ ಕಾರಣ. ಹೀಗಾಗಿ ಪ್ರಪಂಚದಾದ್ಯಂತ ಅಭಿಮಾನಿಗಳು ಐಪಿಎಲ್ನ್ನು ಕಣ್ತುಂಬಿಕೊಳ್ಳುತ್ತಾರೆ.
ಇದನ್ನೂ ಓದಿ:ಮುಂಬೈ ಇಂಡಿಯನ್ಸ್ಗೆ "ಯಾರ್ಕರ್" ಪೆಟ್ಟು: ಪಂಜಾಬ್ಗೆ 13 ರನ್ ಗೆಲುವು