ಮುಂಬೈ: ಐಪಿಎಲ್ 2023ರ ಋತುವಿನ ಆರಂಭದಲ್ಲಿ ಸತತ ಸೋಲಿನಿಂದ ಕಂಗೆಟ್ಟ ಮುಂಬೈ ಇಂಡಿಯನ್ಸ್ ಇದೀಗ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದುಕೊಂಡಿದೆ. ಮಂಗಳವಾರ ರಾತ್ರಿ ನಡೆದ ರಾಯಲ್ ಚಾಲೆಂಜರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಜಯಭೇರಿ ಬಾರಿಸಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲಿಗೆ ಟಾಸ್ ಗೆದ್ದ ರೋಹಿತ್ ಪಡೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ನೀಡಿದ 200 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ್ದ ಮುಂಬೈ 16.3 ಓವರ್ಗಳಲ್ಲೇ ತಲುಪಿ ಗೆಲುವಿನ ಕೇಕೆ ಹಾಕಿತು. ಮುಂಬೈ ಪರ ಸೂರ್ಯಕುಮಾರ್ ಯಾದವ್ (35 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಸಹಿತ 83 ರನ್), ನೇಹಾಲ್ ವಡೇರಾ (34 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ಸಹಿತ ಅಜೇಯ 52 ರನ್) ಬಿರುಸಿನ ಪ್ರದರ್ಶನ ತೋರಿದರು. ಸೂರ್ಯ ಕುಮಾರ್ ಮತ್ತು ವಧೇರಾ ಮೂರನೇ ವಿಕೆಟ್‌ಗೆ 140 ರನ್ಗಳ ಜೊತೆಯಾಟವಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ತಂಡಕ್ಕೆ ಉತ್ತಮ ಆರಂಭ ನೀಡಿದರು. 21 ಎಸೆತಗಳನ್ನು ಎದುರಿಸಿದ ಕಿಶನ್ 42 ರನ್ ಕಲೆ ಹಾಕುವ ಮೂಲಕ ಅಬ್ಬರಿಸಿದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 199 ರನ್ ಪೇರಿಸಿತ್ತು.
ಆರಂಭದಲ್ಲೇ ಹಿನ್ನಡೆ:ಆರಂಭದಲ್ಲೇ ಫಾಪ್ ಬಳಗ ಹಿನ್ನಡೆ ಅನುಭವಿಸಿತು. ಆರಂಭಿಕ ವಿರಾಟ್ ಕೊಹ್ಲಿ ಕೇವಲ ಒಂದು ರನ್ ಗಳಿಸಿ ಬೆಹ್ರೆನ್‌ಡಾರ್ಫ್ ಬೌಲಿಂಗ್‌ನಲ್ಲಿ ಔಟಾದರು. ಇದಾದ ಬೆನ್ನಲ್ಲೇ ಜೇಸನ್ ಬೆಹ್ರೆಂಡಾರ್ಫ್ ಅನುಜ್ ರಾವತ್ ಅವರ ವಿಕೆಟ್ ಪಡೆಯುವಲ್ಲಿಯೂ ಯಶಸ್ವಿಯಾದರು. ಕೇವಲ 16 ರನ್ಗಳಲ್ಲೇ ಎರಡು ನಿರ್ಣಾಯಕ ವಿಕೆಟ್ ಕಳೆದುಕೊಂಡ ತಂಡ ಸಂಕಷ್ಟಕ್ಕೆ ಸಿಲುಕಿತು.
ಡುಪ್ಲೆಸಿ, ಮ್ಯಾಕ್ಸ್ ಅಬ್ಬರ: ಇದೇ ವೇಳೆ ತಂಡ ಸೇರಿಕೊಂಡ ಮ್ಯಾಕ್ಸ್ವೆಲ್, ಡು ಪ್ಲೆಸಿಸ್ ಅವರೊಂದಿಗೆ ಉತ್ತಮ ಇನ್ನಿಂಗ್ಸ್ ಕಟ್ಟಿದ್ದರು. ಇಬ್ಬರು ಬ್ಯಾಟರ್ಗಳು ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ, ಮೂರನೇ ವಿಕೆಟ್‌ಗೆ 120 ರನ್ ಜತೆಯಾಟವಾಡಿದರು. 33 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್ವೆಲ್ 4 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 68 ರನ್ ಕೊಡುಗೆ ನೀಡಿದರು. ಮತ್ತೊಂದೆಡೆ, ಡು ಪ್ಲೆಸಿಸ್ (65) ಸಮಯೋಚಿತ ಆಟವಾಡಿ ತಂಡಕ್ಕೆ ಆಸರೆಯಾದರು.