ಮುಂಬೈ (ಮಹಾರಾಷ್ಟ್ರ): ಇಂಡಿಯನ್ ಪ್ರೀಮಿಯರ್ ಲೀಗ್ನ(ಐಪಿಎಲ್) ಯಶಸ್ವಿ ನಾಯಕನೆಂದೇ ಕರೆಯಲ್ಪಡುವ ರೋಹಿತ್ ಶರ್ಮಾ ಅವರಿಂದು 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದರ ಜೊತೆಗೆ ಅವರು ಮುಂಬೈ ತಂಡದ ನಾಯಕತ್ವ ವಹಿಸಿಕೊಂಡು 10 ವರ್ಷಗಳಾಗುತ್ತಿದೆ. ಈ ಎರಡೂ ಸಂಗತಿಗಳು ಇಂದು ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮತ್ತು ಅವರ ಅಭಿಮಾನಿಗಳಿಗೆ ವಿಶೇಷವಾಗಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಸಂಜೆ 7.30ಕ್ಕೆ ರಾಜಸ್ಥಾನ ರಾಯಲ್ಸ್ ಅನ್ನು ಎದುರಿಸಲಿದೆ. ಇದು ಒಟ್ಟು ಐಪಿಎಲ್ 1,000ನೇ ಪಂದ್ಯವಾಗಿದೆ. 2008ರಲ್ಲಿ ಆರಂಭವಾದ ಟೂರ್ನಿ ಮಹತ್ತರ ಘಟ್ಟವನ್ನು ಇಂದಿನ ಪಂದ್ಯದಲ್ಲಿ ಮುಟ್ಟಲಿದೆ. ಅಂಕಪಟ್ಟಿಯಲ್ಲಿ ಮೇಲಿನಿಂದ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ ಮತ್ತು ಕೆಳಗಿನಿಂದ ಎರಡನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಇಂದು ಪೈಪೋಟಿ ನಡೆಯಲಿದೆ.
ಐದು ಬಾರಿ ಕಪ್ ಗೆದ್ದ ಮುಂಬೈ ಕಳೆದ ವರ್ಷದಿಂದ ಚಾರ್ಮ್ ಕಳೆದುಕೊಂಡಿದೆ. 2023ರ ಆವೃತ್ತಿಯಲ್ಲಿ ಈವರೆಗೆ ಏಳು ಪಂದ್ಯಗಳನ್ನಾಡಿದ್ದು ಕೇವಲ ಮೂರರಲ್ಲಿ ಗೆದ್ದು 6 ಅಂಕ ಹೊಂದಿದೆ. ಇನ್ನು ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ ಈ ವರ್ಷ ಬಲಿಷ್ಠವಾಗಿದ್ದು, ಆಲ್ರೌಂಡ್ ಪ್ರದರ್ಶನದಿಂದ ಎಂಟು ಪಂದ್ಯದಲ್ಲಿ 5 ಗೆಲುವು ದಾಖಲಿಸಿ 10 ಅಂಕ ಗಳಿಸಿದೆ.
ರಾಜಸ್ಥಾನ ಯುವ ಪಡೆ ಆಸರೆ:ಅನುಭವಿ ಮತ್ತು ಉತ್ಸಾಹಿ ತರುಣರ ಮಿಶ್ರಣದಂತಿರುವ ರಾಜಸ್ಥಾನ ದಿ ಬೆಸ್ಟ್ ಆಟ ಆಡುತ್ತಿದೆ. ಅನುಭವಿಗಳಾಗಿ ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ಶಿಮ್ರೋನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಆರ್.ಅಶ್ವಿನ್, ಯಜ್ವೇಂದ್ರ ಚಾಹಲ್ ಮತ್ತು ಟ್ರೆಂಟ್ ಬೌಲ್ಟ್ ಇದ್ದರೆ, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್ ಮತ್ತು ಧ್ರುವ್ ಜುರೆಲ್ ಯುವ ಆಟಗಾರರು. ಜೈಸ್ವಾಲ್, ಪಡಿಕ್ಕಲ್ ಮತ್ತು ಧ್ರುವ್ ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿರುವುದು ತಂಡದ ಗೆಲುವಿಗೆ ಕಾರಣವಾಗಿದೆ.
ಮುಂಬೈ ತಂಡದಲ್ಲಿ ಸಾಂಘಿಕ ಪ್ರದರ್ಶನದ ಕೊರತೆ: ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ, ಒಗ್ಗಟ್ಟಿನ ಪ್ರದರ್ಶನ ಮೂಡಿ ಬರುತ್ತಿಲ್ಲ. ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್, ತಿಲಕ್ ವರ್ಮಾ, ಕ್ಯಾಮರಾನ್ ಗ್ರೀನ್ ಮತ್ತು ಟಿಮ್ ಡೇವಿಡ್ ಫಾರ್ಮ್ನಲ್ಲಿದ್ದರೂ ಬೃಹತ್ ಜೊತೆಯಾಟ ಕಂಡುಬರುತ್ತಿಲ್ಲ. ಇದು ತಂಡ ದೊಡ್ಡ ಮೊತ್ತ ಕಲೆಹಾಕುವಲ್ಲಿ ಸಮಸ್ಯೆಯಾಗುತ್ತಿದೆ.