ಮುಂಬೈ:ಮುಂಬೈ ಇಂಡಿಯನ್ಸ್ ತಂಡದ ಬಲವೇ ಬಲಿಷ್ಠ ಬ್ಯಾಟಿಂಗ್. ಬ್ಯಾಟರ್ಗಳ ದಂಡೇ ಹೊಂದಿರುವ ತಂಡ ಶನಿವಾರ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಲಿಲ್ಲ. ನಾಯಕ ರೋಹಿತ್ ಶರ್ಮಾ, ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್ ಅಬ್ಬರಿಸಿದರೂ, ಅರ್ಷದೀಪ್ ಸಿಂಗ್ರ ಬೌಲಿಂಗ್ ಕರಾಮತ್ತಿನ ಮುಂದೆ ಗೆಲುವು ಸಾಧಿಸಲಾಗಲಿಲ್ಲ.
ರೋಚಕ ಕದನವಾಗಿ ಮಾರ್ಪಟ್ಟಿದ್ದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈಗೆ ಕೊನೆಯ ಓವರ್ನಲ್ಲಿ ಗೆಲ್ಲಲು 16 ರನ್ ಬೇಕಿತ್ತು. ದಾಳಿಗೆ ಇಳಿದಿದ್ದು ಯುವ ವೇಗಿ ಅರ್ಶದೀಪ್ ಸಿಂಗ್. 6 ಎಸೆತಗಳಲ್ಲಿ 3 ರನ್ ನೀಡಿ 2 ವಿಕೆಟ್ ಗಳಿಸಿದರು. ಸಿಂಗ್ ಕರಾರುವಾಕ್ ದಾಳಿಗೆ ಮುಂಬೈ ಬೆಂಡಾಗಿ 13 ರನ್ಗಳ ಸೋಲು ಕಂಡಿತು.
ಮುರಿದ ವಿಕೆಟ್:ಯುವ ವೇಗಿ ಅರ್ಶದೀಪ್ ಸಿಂಗ್ ಕೊನೆಯ ಓವರ್ ನಿಜಕ್ಕೂ ಇಡೀ ಕ್ರೀಡಾಂಗಣವನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. ಅಬ್ಬರಿಸುತ್ತಿದ್ದ ಟಿಮ್ ಡೇವಿಡ್ ಜೊತೆಗೆ ತಿಲಕ್ ವರ್ಮಾ ಮೈದಾನದಲ್ಲಿದ್ದರು. ಗೆಲುವು ಸಿಗಲಿದೆ ಎಂದೇ ಭಾವಿಸಿದ್ದ ಮುಂಬೈಗೆ ಸಿಂಗ್ ಆಸೆಯನ್ನೇ ಚಿವುಟಿ ಹಾಕಿದರು. ಯಾರ್ಕರ್ ಬೌಲಿಂಗ್ ಮಾಡಿದ ಸಿಂಗ್ ವಿಕೆಟ್ ಮುರಿದು ಹಾಕಿದರು. ಈ ಮೂಲಕ ಮುಂಬೈನ ಗೆಲುವನ್ನೂ ಮುರಿದರು.
4 ಓವರ್ಗಳಲ್ಲಿ 29 ರನ್ ಬಿಟ್ಟುಕೊಟ್ಟ ಸಿಂಗ್ 4 ವಿಕೆಟ್ ಗಳಿಸಿದರು. ಕೊನೆಯ ರೋಚಕ ಓವರ್ನಲ್ಲಿ ತಿಲಕ್ ವರ್ಮಾ ಮತ್ತು ನೆಹಾಲ್ ವಧೇರಾ ಅವರನ್ನು ಅರ್ಷದೀಪ್ ಸಿಂಗ್ ಕ್ಲೀನ್ ಬೌಲ್ಡ್ ಮಾಡಿದರು. ಎರಡೂ ಬಾರಿ ವಿಕೆಟ್ ಮುರಿದು ಹೋಯಿತು. ಅಷ್ಟರಮಟ್ಟಿಗೆ ಸಿಂಗ್ ಯಾರ್ಕರ್ ಕೆಲಸ ಮಾಡಿತು.