ಮುಂಬೈ (ಮಹಾರಾಷ್ಟ್ರ): ಕಳೆದ ಮೂರು ಪಂದ್ಯಗಳಿಂದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಯಾದವ್ ವಾಂಖೆಡೆಯಲ್ಲಿ ಗುಜರಾತ್ ವಿರುದ್ಧವೂ ಅಬ್ಬರಿಸಿದ್ದಾರೆ. ಗೋಲ್ಡನ್ ಫಾರ್ಮ್ ಮುಂದುವರೆಸಿರುವ ಸೂರ್ಯಕುಮಾರ್ ಭರ್ಜರಿ ಶತಕದ (103, 49 ಎಸೆತ) ಬಲದಿಂದ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟಾನ್ಸ್ಗೆ 219 ರನ್ ಗೆಲುವಿನ ಗುರಿ ನೀಡಿದೆ. 20 ಓವರ್ನ ಅಂತ್ಯಕ್ಕೆ ರೋಹಿತ್ ಪಡೆ 5 ವಿಕೆಟ್ ನಷ್ಟಕ್ಕೆ 218 ರನ್ ಕಲೆ ಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ 61 ರನ್ ಆರಂಭಿಕ ಜೊತೆಯಾಟ ನೀಡಿದರು. ಆದರೆ ಹಿಟ್ಮ್ಯಾನ್ ಬೃಹತ್ ಮೊತ್ತ (29) ಗಳಿಸುವಲ್ಲಿ ವಿಫಲರಾದರು. ನಂತರ ಕ್ರೀಸ್ಗೆ ಬಂದ ಸೂರ್ಯ ಕಿಶನ್ಗೆ ಜೊತೆಯಾದರು. ಆದರೆ 5 ರನ್ ಅಂತರದಲ್ಲೇ ಇಶಾನ್ ಕಿಶನ್ (31) ಕೂಡ ಪೆವಿಲಿಯನ್ ಸೇರಿಕೊಂಡರು.
ಕಿಶಾನ್ ನಂತರ ಬಂದ ಯುವ ಪ್ರತಿಭೆ ನೆಹಾಲ್ ವಧೇರಾ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ವಧೇರಾ ಕೇವಲ 7 ಬಾಲ್ಗೆ 15 ರನ್ ಬಾರಿ ವಿಕೆಟ್ ಒಪ್ಪಿಸಿದರು. ಬಳಿಕ ಬ್ಯಾಟಿಂಗ್ ಬಂದ ವಿಷ್ಣು ವಿನೋದ್ ಅವರು ಸೂರ್ಯಗೆ ತಕ್ಕ ಸಾಥ್ ನೀಡಿದ್ದು, ಈ ಜೋಡಿ 65 ರನ್ ಜೊತೆಯಾಟ ಆಡಿತು. ವಿಷ್ಣು ವಿನೋದ್ 20 ಬಾಲ್ನಲ್ಲಿ 30 ರನ್ ಗಳಿಸಿ ಔಟಾದರೆ, ಬಲಗೈ ದಾಂಡಿದ ಟಿಮ್ ಡೇವಿಡ್ (5) ಕೂಡ ಅಬ್ಬರಿಸುವಲ್ಲಿ ವಿಫಲರಾದರು.