ಮುಂಬೈ (ಮಹಾರಾಷ್ಟ್ರ): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ಲೇ ಆಫ್ನ ಪ್ರವೇಶಕ್ಕೆ ಪೈಪೋಟಿ ಹೆಚ್ಚಾಗುತ್ತಿದೆ. ಮೊದಲ ನಾಲ್ಕು ಸ್ಥಾನವನ್ನು ಪಡೆಯಲು 8 ತಂಡಗಳು ಸ್ಪರ್ಧೆಯಲ್ಲಿದೆ. ಹೀಗಿರುವಾಗ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ಮುಖಾಮುಖಿಯಾಗುತ್ತಿದೆ.
ಪ್ಲೇ ಆಫ್ ಸ್ಥಾನ ಪಡೆಯಲು ಎರಡೂ ತಂಡಕ್ಕೆ ಈ ಪಂದ್ಯ ಅತ್ಯಂತ ಮುಖ್ಯವಾಗಿದೆ. ಟೇಬಲ್ ಟಾಪ್ನಲ್ಲಿರುವ ಗುಜರಾತ್ ಇಂದಿನ ಪಂದ್ಯ ಗೆದ್ದಲ್ಲಿ ಅಗ್ರಸ್ಥಾನದಲ್ಲಿ ಭದ್ರವಾಗಲಿದ್ದು, ಕ್ವಾಲಿಫೈ ಆಗಲು ಇನ್ನೊಂದು ಪಂದ್ಯದ ಗೆಲುವು ಬೇಕಾದೀತು.
ಮುಂಬೈ ಇಂಡಿಯನ್ಸ್ಗೆ ಈ ಪಂದ್ಯ ಸೇರಿದಂತೆ ಮುಂದೆ ಆಡಲಿರುವ ಎರಡು ಪಂದ್ಯಗಳು ನಿರ್ಣಾಯಕವಾಗಲಿರುವುದರಿಂದ ಗೆಲ್ಲುವ ಒತ್ತಡ ತಂಡದ ಮೇಲಿದೆ. ತವರು ಮೈದಾನವಾಗಿರುವ ವಾಂಖೆಡೆಯಲ್ಲಿ ಇಂದಿನ ಪಂದ್ಯ ನಡೆಯುತ್ತಿರುವುದರಿಂದ ಇದರ ಲಾಭ ಪಡೆದುಕೊಳ್ಳುವ ಸಾಧ್ಯತೆ ರೋಹಿತ್ ಪಡೆಗಿದೆ. ಕಳೆದ ಮೂರು ಪಂದ್ಯದಲ್ಲಿ 200 ಪ್ಲೆಸ್ ಗುರಿಯನ್ನು ಲೀಲಾಜಾಲವಾಗಿ ಭೇದಿಸಿರುವ ನೀಲಿ ಟೀಮ್ ಇಂದು ಇನ್ನಷ್ಟು ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.
ಅತ್ತ ಗುಜರಾತ್ ಕಳೆದ ಮೂರು ಪಂದ್ಯದಲ್ಲಿ ಎದುರಾಳಿಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ, ಎರಡು ಪಂದ್ಯದಲ್ಲಿ ಜಯಿಸಿದೆ. ಇದೇ ಬೌಲಿಂಗ್ ಬಲವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಹಾರ್ದಿಕ್ ಪಾಂಡ್ಯ ತೆಗೆದುಕೊಂಡು ಹೋಗಲಿದ್ದಾರೆ. ಬೃಹತ್ ಮೊತ್ತವನ್ನು ಪೇರಿಸಿ ಗೆದ್ದ ಮುಂಬೈಗೆ ಗುಜರಾತ್ ಬೌಲರ್ಗಳು ಸವಾಲಾಗಲಿದ್ದಾರೆ.
ಅದೆ ರೀತಿ ಗುಜರಾತ್ ಬೃಹತ್ ರನ್ ನೀಡಿದರೂ ಅದನ್ನೂ ಬೆನ್ನಟ್ಟುವ ಸಾಮರ್ಥ್ಯದ ಪಡೆ ರೋಹಿತ್ ಬಳಿ ಇದೆ. ಗೆಲುವಿನ ಅನಿವಾರ್ಯ ಇರುವ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಇಂದಿನ ಹಣಾಹಣಿ ಜೋರಾಗಿಯೇ ನಡೆಯಲಿದೆ.