ಮುಂಬೈ (ಮಹಾರಾಷ್ಟ್ರ):ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡದ ಮಾಜಿ ನಾಯಕ ಎಂ ಎಸ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ನಾಯಕನ ಮುಂಬೈ ಇಂಡಿಯನ್ಸ್ನ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ನ 12ನೇ ಪಂದ್ಯ ನಡೆಯಲಿದೆ. ರೋಹಿತ್ ಪಡೆ ತವರು ನೆಲದಲ್ಲಿ ಗೆಲುವಿನ ಟ್ರ್ಯಾಕ್ ಮರಳುವ ಪ್ರಯತ್ನದಲ್ಲಿದೆ. ಎರಡನೇ ಪಂದ್ಯ ಗೆದ್ದಿರುವ ಸಿಎಸ್ಕೆ ಜಯವನ್ನು ಮುಂದುವರೆಸುವ ಚಿಂತನೆಯಲ್ಲಿದೆ.
ಕಳೆದ ಐಪಿಎಲ್ ಸೀಸನ್ನಲ್ಲಿ ಉಭಯ ತಂಡಗಳು ಉತ್ತಮ ಪ್ರದರ್ಶನ ನೀಡದ ಕಾರಣ ಈ ಬಾರಿ ಅದನ್ನು ಮರೆಮಾಚುವ ಪ್ರದರ್ಶನ ನೀಡಬೇಕಿದೆ. ಇಬ್ಬರು ನಾಯಕರ ಮೇಲೆ ಈ ಒತ್ತಡ ಇದ್ದು, ಅತಿ ಹೆಚ್ಚು ಕಪ್ಗಳನ್ನು ಗೆದ್ದ ತಂಡಗಳಾಗಿದ್ದು, ವೈಫಲ್ಯ ಕಾಣುತ್ತಿರುವುದು ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ರೋಹಿತ್ ಶರ್ಮಾ ಮತ್ತು ಮಹೇಂದ್ರ ಸಿಂಗ್ ಧೋನಿ ಯಶಸ್ವಿ ನಾಯಕರಾಗಿದ್ದು, ತಂಡವನ್ನು ಗೆಲುವಿನ ಲಯಕ್ಕೆ ತರಬೇಕಿದೆ.
ಚೆನ್ನೈ ಸೂಪರ್ ಕಿಂಗ್ಸ್ ತನ್ನ ಎರಡು ಪಂದ್ಯಗಳಲ್ಲಿ ಒಂದು ಸೋಲು ಮತ್ತು ಒಂದು ಗೆಲುವಿನೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ತಂಡ ಒಂದು ಪಂದ್ಯದಲ್ಲಿ ಒಂದು ಸೋಲಿನೊಂದಿಗೆ 9 ನೇ ಸ್ಥಾನದಲ್ಲಿದೆ. ಮುಂಬೈ ತಂಡ ರಾಯಲ್ ಚಾಲೆಂಜ್ ಬೆಂಗಳೂರು ವಿರುದ್ಧ ಆಡಿದ ಒಂದು ಪಂದ್ಯದಲ್ಲಿ ಸೋತಿದೆ. ಮುಂಬೈ ಇಂಡಿಯನ್ಸ್ ತವರು ನೆಲದಲ್ಲಿ ಗೆಲುವಿನ ಭರವಸೆಯಲ್ಲಿದೆ.
ಬೆಂಗಳೂರು ಎದುರು ಮುಂಬೈ ಇಂಡಿಯನ್ಸ್ನ ಮಧ್ಯಮ ಕ್ರಮಾಂಕದ ತಿಲಕ್ ವರ್ಮ ಮಾತ್ರ ಬ್ಯಾಟಿಂಗ್ನಲ್ಲಿ ಘರ್ಜಿಸಿದ್ದು, ಮತ್ಯಾವ ಬ್ಯಾಟರ್ಗಳು ದೊಡ್ಡ ಮೊತ್ತ ಕಲೆ ಹಾಕಲಿಲ್ಲ. ನಾಯಕ ರೋಹಿತ್ ಶರ್ಮಾ ಮತ್ತು ಆರಂಭಿಕ ಇಶಾನ್ ಕಿಶನ್ ಲಯಕ್ಕೆ ಮರಳ ಬೇಕಿದೆ. ಸೂರ್ಯ ಕುಮಾರ್ ಯಾದವ್ ಬ್ಯಾಟ್ನಿಂದಲೂ ರನ್ ಬರಬೇಕಿದೆ.