ಪುಣೆ:ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 13 ರನ್‌ಗಳ ಸೋಲು ಅನುಭವಿಸಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ 'ಬ್ಯಾಟ್ಸ್ಮನ್ಗಳ ಕಳಪೆ ಹೊಡೆತಗಳೇ ಸೋಲಿಗೆ ಕಾರಣವಾಯಿತು' ಎಂದು ಹೇಳಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 8 ವಿಕೆಟ್‌ಗೆ 173 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಸಿಎಸ್ಕೆ 8 ವಿಕೆಟ್ ಕಳೆದುಕೊಂಡು 160 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಇದು ತಂಡ ಪ್ಲೇ ಆಫ್ ಹಂತಕ್ಕೇರುವ ಆಸೆಗೆ ಮುಳ್ಳಾಗಲಿದೆ.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಧೋನಿ, ಆರ್ಸಿಬಿ ತಂಡವನ್ನು 170 ರನ್‌ಗಳ ಅಂತರದಲ್ಲಿ ಕಟ್ಟಿ ಹಾಕಲು ಯಶಸ್ವಿಯಾದೆವು. ಆದರೆ, ಬ್ಯಾಟಿಂಗ್ನಲ್ಲಿ ಎಡವಿದೆವು. ಬೃಹತ್ ಮೊತ್ತವಿದ್ದಾಗ ತಂಡ ಉತ್ತಮ ಆರಂಭ ಪಡೆಯುವುದು ಅನಿವಾರ್ಯ. ತಂಡ ಉತ್ತಮ ಆರಂಭದ ಮಧ್ಯೆಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯ ತಂಡದ ಸೋಲಿಗೆ ಕಾರಣವಾಯಿತು ಎಂದು ಅಭಿಪ್ರಾಯಪಟ್ಟರು.