ಲಖನೌ( ಉತ್ತರಪ್ರದೇಶ): ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಬುಧವಾರ ನಡೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ಮೊಯಿನ್ ಅಲಿ ಹಿಡಿದ ಕ್ಯಾಚ್ ತಂಡದ ನಾಯಕ ಎಂಎಸ್ ಧೋನಿ ಸೇರಿದಂತೆ ಎಲ್ಲರನ್ನೂ ಬೆರಗುಗೊಳಿಸಿದೆ. ಲಕ್ನೋ ಪರ ಆರಂಭಿಕ ಆಟಗಾರರಾದ ಮನನ್ ವೊಹ್ರಾ, ಕೈಲ್ ಮೇಯರ್ಸ್ ತಮ್ಮ ವಿಕೆಟ್ಗಳನ್ನು ಒಪ್ಪಿಸಿ ಬಹುಬೇಗ ನಿರ್ಗಮಿಸುವ ಮೂಲಕ ತಂಡ ಒತ್ತಡಕ್ಕೆ ಸಿಲುಕಿಸಿತ್ತು.
ಬಳಿಕ ಕ್ರೀಸ್ಗಿಳಿದ ಕರಣ್ ಶರ್ಮಾ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಅದರಂತೆ ಕರಣ್ ಶರ್ಮಾ ಕೂಡು ನಿಧಾನಗತಿಯಲ್ಲಿ ಪಿಚ್ಗೆ ಒಗ್ಗಿಕೊಳ್ಳಲು ಆರಂಭಿಸಿದ್ದರು. ಆದರೆ ಮೊಯಿನ್ ಅಲಿ ಎಸೆತದಲ್ಲಿ ಬಾಲ್ ಅನ್ನು ಸ್ಟ್ರೈಟ್ ಬೌಂಡರಿಗಟ್ಟಲು ಯತ್ನಿಸಿದ್ದು, ಈ ವೇಳೆ ಮೊಯಿನ್ ಅಲಿ ಭರ್ಜರಿ ಕ್ಯಾಚ್ ಹಿಡಿದಿದ್ದಾರೆ. ಅದ್ಭುತ ಕ್ಯಾಚ್ ಕಂಡು ಧೋನಿ ಸೇರಿದಂತೆ ಸಹ ಆಟಗಾರರು ಬೆರಗುಗೊಂಡರು.
ನಿಧಾನಗತಿಯ ಪಿಚ್ನಲ್ಲಿ ಆಯುಷ್ ಬಡೋನಿ ಸಮಯೋಚಿತ ಆಟವಾಡಿ ಅರ್ಧಶತಕ ಪೂರ್ಣಗೊಳಿಸಿದರು. ಅಗ್ರ ಕ್ರಮಾಂಕದ ಆಟಗಾರರ ವೈಫಲ್ಯದ ನುಡುವೆಯೇ ಬಡೋನಿ ಉತ್ತಮ ಪ್ರದರ್ಶನ ತೋರಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊನೆಯ ಓವರ್ನಲ್ಲಿ 2 ಎಸೆತೆಗಳು ಪೂರ್ಣಗೊಳ್ಳುತ್ತಿದ್ದಂತೆ ಮಳೆ ಆರಂಭವಾಗಿ ಪಂದ್ಯ ರದ್ದಾಯಿತು. 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಮಳೆಯಿಂದಾಗಿ ರದ್ದಾದ ಮೊದಲ ಪಂದ್ಯ ಇದಾಗಿದೆ.
ಸದ್ಯ ಎರಡು ತಂಡಗಳು 10 ಪಂದ್ಯಗಳನ್ನು ಆಡಿದ್ದ ತಲಾ 11 ಅಂಕಗಳೊಂದಿಗೆ, ಲಕ್ನೋ ಮತ್ತು ಚೆನ್ನೈ ಕ್ರಮವಾಗಿ ಪಾಯಿಂಟ್ ಪಟ್ಟಿಯಲ್ಲಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಚೆನ್ನೈ (+0.329) ರನ್ ರೇಟ್ ಹೊಂದಿದ್ದರೆ ಲಕ್ನೋ (+0.639) ನಿವ್ವಳ ರನ್‌ರೇಟ್ ನೊಂದಿಗೆ ಎರಡನೇ ಸ್ಥಾನದಲ್ಲಿದೆ.
ಸ್ಕೋರ್ ಕಾರ್ಡ್:ಲಕ್ನೋ ವಿರುದ್ಧ ಟಾಸ್ಗೆದ್ದ ಧೋನಿ ಪಡೆ ಪೀಲ್ಡಿಂಗ್ ಆಯ್ದುಕೊಂಡು ಲಕ್ನೋಗೆ ಬ್ಯಾಟಿಂಗ್ ಆಹ್ವಾನಿಸಿತು. ಲಕ್ನೋ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಆರಂಭಿಕ ಬ್ಯಾಟರ್ ಕೈಲ್ ಮೇಯರ್ಸ್ (14) ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸಿದರೆ, ಮನನ್ ವೋಹ್ರಾ (10) ಮಹೇಶ್ ತೀಕ್ಷ್ಣ ಅವರಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ನಂತರ ನಾಯಕ ಕೃನಾಲ್ ಪಾಂಡ್ಯ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಮಾರ್ಕಸ್ ಸ್ಟೋಯ್ನಿಸ್ (6) ಮತ್ತು ಕರಣ್ ಶರ್ಮಾ (9) ಕೂಡ ಬೇಗ ನಿರ್ಗಮಿಸಿದರು. ಪವರ್- ಪ್ಲೇ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡ ಲಕ್ನೋ 31 ರನ್ ಕಲೆಹಾಕಿತ್ತು. ಬಳಿಕ ನಿಕೋಲಸ್ ಪೂರನ್ ಮತ್ತು ಆಯುಷ್ ಬದೋನಿ ಜೋಡಿ ತಂಡದ ಮೊತ್ತವನ್ನು 100ರ ಗಡಿ ಮುಟ್ಟಿಸಿತು. ಈ ವೇಳೆ 31 ಬಾಲ್ನಲ್ಲಿ 20 ರನ್ ಗಳಸಿದ್ದ ಪೂರನ್ ವಿಕೆಟ್ ಕೊಟ್ಟರು. ನಂತರ ಬಂದ ಕೃಷ್ಣಪ್ಪ ಗೌತಮ್ ಸಹ 1 ರನ್ಗೆ ಔಟ್ ಆದರು. ಈ ಮೂಲಕ 19.2 ಓವರ್ಗೆ ಪಂದ್ಯದ ಒಟ್ಟು ಮೊತ್ತ 125 ಆಗಿತ್ತು. ಇನ್ನು ಚೆನ್ನೈ ಪರ ಮಹೇಶ್ ತೀಕ್ಷ್ಣ, ಮೊಯಿನ್ ಅಲಿ, ಮಥೀಶ ಪತಿರಣ ತಲಾ ಎರಡು ವಿಕೆಟ್ ಪಡೆದರೆ ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:ಹೆಸರು ಬಳಸದೇ ಗೂಢಾರ್ಥದ ಟ್ವೀಟ್ ಮಾಡಿದ ಗಂಭೀರ್: ಯಾರಿಗೆ ಗೊತ್ತಾ?