ಮುಂಬೈ(ಮಹಾರಾಷ್ಟ್ರ):4 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪರ್ಯಾಯ ನಾಯಕನ ಹುಡುಕಾಟ ಆರಂಭಿಸಿದೆ. ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಂತರ ನೂತನ ನಾಯಕ ಯಾರಾಗಬೇಕು ಎಂಬುದನ್ನು ತಂಡ ಈಗಲೇ ಲೆಕ್ಕಾಚಾರ ಹಾಕುತ್ತಿದೆ.
ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಸೀಸನ್ 2023 ರ ನಂತರ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ತೊರೆಯುತ್ತಾರೆ ಎಂದು ಹೇಳಲಾಗಿದೆ. ಅವರ ಸ್ಥಾನಕ್ಕೆ ಮೂವರು ಪ್ರಮುಖ ಆಟಗಾರರ ಹೆಸರು ಕೇಳಿಬಂದಿದೆ. ಇಂಗ್ಲೆಂಡ್ ಸ್ಪಿನ್ನರ್ ಮೊಯಿನ್ ಅಲಿ, ಆಲ್ರೌಂಡರ್ ಬೆನ್ಸ್ಟೋಕ್ಸ್ ಮತ್ತು ಋತುರಾಜ್ ಗಾಯಕ್ವಾಡ್ ಈ ರೇಸ್ನಲ್ಲಿದ್ದಾರೆ.
ಧೋನಿ ನಾಯಕತ್ವ ತೊರೆದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ಗಳಾದ ಮೊಯಿನ್ ಅಲಿ ಮತ್ತು ಬೆನ್ ಸ್ಟೋಕ್ಸ್ ಅವರು ನಾಯಕತ್ವದ ದೊಡ್ಡ ಸ್ಪರ್ಧಿಯಾಗಿದ್ದಾರೆ. ಇಬ್ಬರೂ ದೀರ್ಘಕಾಲದವರೆಗೆ ತಂಡದ ಭಾಗವಾಗಿ ಉಳಿಯಬಹುದಾಗಿದೆ. ಡಿಸೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ 16.25 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಅವರು ಚೆನ್ನೈ ಪರ ಋತುವಿನ ಮೊದಲ ಎರಡು ಪಂದ್ಯಗಳಲ್ಲಿ ಆಡಿದ್ದಾರೆ. ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 15 ರನ್ ಗಳಿಸಿದ್ದು, ಬೌಲಿಂಗ್ ಕೂಡ ಆರಂಭಿಸಿದ್ದಾರೆ.
ಸ್ಟೋಕ್ಸ್ ನಾಯಕತ್ವ ವಹಿಸಿಕೊಂಡ ನಂತರ ಇಂಗ್ಲೆಂಡ್ ಟೆಸ್ಟ್ ತಂಡ ಉತ್ತಮ ಸ್ಥಿತಿಯಲ್ಲಿದೆ. ಅವರ ನಾಯಕತ್ವದಲ್ಲಿ ತಂಡ 12 ಪಂದ್ಯಗಳಲ್ಲಿ 10 ರಲ್ಲಿ ಗೆದ್ದಿದೆ. ಟಿ20 ಮಾದರಿಯಲ್ಲಿ ಆಟಗಾರ ಪ್ರಭಾವಿಯಾಗಿದ್ದಾರೆ. ಇದರಿಂದ ತಂಡ ಅವರನ್ನು ದುಬಾರಿ ಬೆಲೆಗೆ ಖರೀದಿ ಮಾಡಿದೆ.