ಚೆನ್ನೈ (ತಮಿಳುನಾಡು): ಭಾರತ ಮತ್ತು ಮುಂಬೈ ಇಂಡಿಯನ್ಸ್ (MI) ನಾಯಕ ರೋಹಿತ್ ಶರ್ಮಾ ಶನಿವಾರ ತಮ್ಮ ಹೆಸರಿಗೆ ಅನಗತ್ಯ ದಾಖಲೆಯೊಂದನ್ನು ಬರೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಡಕ್ಗೆ ಔಟ್ ಆದ ಆಟಗಾರ ಎಂಬ ದಾಖಲೆ ಬರೆದರು. ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಪಂದ್ಯದಲ್ಲಿ ಅನುಭವಿ ಬ್ಯಾಟರ್ ರೋಹಿತ್ ಈ ದಾಖಲೆ ಮಾಡಿದ್ದಾರೆ.
ಮುಂಬೈ ಇಂಡಿಯನ್ಸ್ನ ಆರಂಭಿಕರಲ್ಲಿ ಇಂದು ಬದಲಾವಣೆ ಮಾಡಲಾಯಿತು. ಧೋನಿ ಅವರ ಪ್ರಯೋಗದಿಂದ ಆರಂಭಿಕ ಬ್ಯಾಟರ್ ಆಗಿ ಬಡ್ತಿ ಪಡೆದ ರೋಹಿತ್ ಶರ್ಮಾ ನಂತರ ಅಂತಾರಾಷ್ಟ್ರೀಯ ಹಾಗೂ ಲೀಗ್ ಪಂದ್ಯದಲ್ಲಿ ಆರಂಭಿಕರಾಗಿಯೇ ಕಣಕ್ಕಿಳಿಯುತ್ತಿದ್ದಾರೆ. ಆದರೆ, ಇಂದು ರೋಹಿತ್ ಶರ್ಮಾ ಬದಲಾಗಿ ಇಶಾನ್ ಕಿಶನ್ ಜೊತೆ ಆಸ್ಟ್ರೇಲಿಯದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಇನ್ನಿಂಗ್ಸ್ ಆರಂಭಿಸಿದರು. ಮೂರನೇ ಸ್ಥಾನದಲ್ಲಿ ಬರುವ ಗ್ರೀನ್ಗೆ ರೋಹಿತ್ ಬಡ್ತಿ ನೀಡಿ ಆರಂಭಿಕರಾಗಿ ಮೈದಾನಕ್ಕಿಳಿಸಿದರು.
ಆದರೆ, ಮುಂಬೈ ಇಂಡಿಯನ್ಸ್ನ ಈ ಪ್ರಯೋಗ ಫಲ ನೀಡಲಿಲ್ಲ. ಕಳೆದ ಪಂದ್ಯಗಳಲ್ಲಿ ತಂಡಕ್ಕೆ ಆಸರೆಯಾಗಿದ್ದ ಗ್ರೀನ್ ಆರಂಭಿಕರಾಗಿ 6 ರನ್ ಗಳಿಸಿದ್ದಾಗ ತುಷಾರ್ ದೇಶಪಾಂಡೆಗೆ ವಿಕೆಟ್ ಕೊಟ್ಟರು. ಇವರ ಬೆನ್ನಲ್ಲೇ ಆರಂಭಿಕ ಇಶಾನ್ ಕಿಶನ್ ಸಹ 7 ರನ್ಗೆ ಔಟ್ ಆದರು. ನಾಯಕ ರೋಹಿತ್ ಶರ್ಮಾ ಗ್ರೀನ್ ವಿಕೆಟ್ ಪಡೆದ ನಂತರ ಮೂರನೇ ಬ್ಯಾಟರ್ ಆಗಿ ಕ್ರೀಸ್ಗೆ ಬಂದರು. ಇಂದು ಮೂರು ಬಾಲ್ ಎದುರಿಸಿದ ರೋಹಿತ್ ಶರ್ಮಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.