ಮುಂಬೈ:ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಲೀಗ್ ಹಂತದಲ್ಲೇ ಹೊರಬಿದ್ದು, ಲಕ್ಷಾಂತರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇದರ ಮಧ್ಯೆ ತಂಡದ ಆಟಗಾರ ಅರ್ಜುನ್ ತೆಂಡೂಲ್ಕರ್ ಕೂಡ ಆಡುವ 11ರಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಾರೆ. ಯಾವ ಕಾರಣಕ್ಕಾಗಿ ಅವರಿಗೆ ಆಡುವ 11ರ ಬಳಗದಲ್ಲಿ ಅವಕಾಶ ಸಿಗಲಿಲ್ಲ ಎಂಬ ವಿಷಯವನ್ನ ತಂಡದ ಬೌಲಿಂಗ್ ಕೋಚ್ ಹಂಚಿಕೊಂಡಿದ್ದಾರೆ.
ಐಪಿಎಲ್ ಮುಗಿದ ಬಳಿಕ ಇದರ ಬಗ್ಗೆ ಮಾತನಾಡಿರುವ ಬೌಲಿಂಗ್ ಕೋಚ್ ಶೇನ್ ಬಾಂಡ್, ಅರ್ಜುನ್ ತೆಂಡೂಲ್ಕರ್ ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಳ್ಳಲು ಬ್ಯಾಟಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಮತ್ತಷ್ಟು ಸುಧಾರಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. ಮುಂಬೈನಂತಹ ತಂಡದಲ್ಲಿ ನಾವು ಆಡುವಾಗ ಪ್ಲೇಯಿಂಗ್ XI ಪ್ರವೇಶ ಪಡೆದುಕೊಳ್ಳುವುದು ಕಠಿಣ. ಅದಕ್ಕಾಗಿ ಸಾಕಷ್ಟು ಕಠಿಣ ಪರಿಶ್ರಮದ ಅವಶ್ಯಕತೆ ಇದೆ ಎಂದರು.
ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಸರಣಿ.. ಲಂಕಾ ತಂಡಕ್ಕೆ ಬೌಲಿಂಗ್ ಸ್ಟ್ರಾಟರ್ಜಿ ಕೋಚ್ ಆಗಿ ಮಲಿಂಗಾ ನೇಮಕ
ಇಂಡಿಯನ್ ಪ್ರೀಮಿಯರ್ ಲೀಗ್ನ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಅರ್ಜುನ್ ತೆಂಡೂಲ್ಕರ್ಗೆ ಮುಂಬೈ ಇಂಡಿಯನ್ಸ್ 30 ಲಕ್ಷ ರೂ. ಮುಖಬೆಲೆ ನೀಡಿ ಖರೀದಿ ಮಾಡಿತ್ತು. ಕಳೆದ ಎರಡು ಆವೃತ್ತಿಗಳಿಂದ ತಂಡದ ಭಾಗವಾಗಿದ್ದರೂ ಆಡುವ 11ರ ಬಳಗದಲ್ಲಿ ಮಾತ್ರ ಕಾಣಿಸಿಕೊಂಡಿಲ್ಲ. ಕೇವಲ ನೆಟ್ ಬೌಲರ್ ಆಗಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ. ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ಅರ್ಜುನ್ ತೆಂಡೂಲ್ಕರ್ ಕೆಲಸ ಮಾಡಿದರೆ, ಖಂಡಿತವಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ ಎಂದು ಬಾಂಡ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇದೇ ವಿಚಾರವಾಗಿ ಕಳೆದ ಕೆಲ ದಿನಗಳ ಹಿಂದೆ ಸಚಿನ್ ತೆಂಡೂಲ್ಕರ್ ಮಾತನಾಡಿದ್ದರು. ಅರ್ಜುನ್ಗೆ ಕೇವಲ ಆಟದ ಬಗ್ಗೆ ಗಮನ ಹರಿಸುವಂತೆ ಕಿವಿಮಾತು ಹೇಳಿದ್ದೇನೆ. ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಳ್ಳುವುದು ತಂಡದ ಒಂದು ಭಾಗ. ಆಟದ ಬಗ್ಗೆ ಮಾತ್ರ ಗಮನ ಹರಿಸು, ಬದಲಾಗಿ ಆಯ್ಕೆಯಾಗುವುದರ ಬಗ್ಗೆ ಅಲ್ಲ ಎಂದು ತಿಳಿಸಿದ್ದರು. ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಐದು ಸಲದ ಚಾಂಪಿಯನ್ ಮುಂಬೈ ಇಂಡಿಯನ್ಸ್ ಆಡಿರುವ 14 ಪಂದ್ಯಗಳಿಂದ ಕೇವಲ 4ರಲ್ಲಿ ಗೆಲುವು ದಾಖಲು ಮಾಡಿ, 8 ಪಾಯಿಂಟ್ ಗಳಿಕೆ ಮಾಡಿ, ಅಭಿಯಾನ ಮುಗಿಸಿದೆ.