ಅಂದುಕೊಂಡಂತೆ ಆಗಿದ್ದರೆ, ನಿನ್ನೆ ರಾತ್ರಿಯೇ ಇಂಡಿಯನ್ ಪ್ರೀಮಿಯರ್ ಲೀಗ್ನ(ಐಪಿಎಲ್) 16ನೇ ಆವೃತ್ತಿಯ ಚಾಂಪಿಯನ್ ಯಾರೆಂಬುದು ಘೋಷಣೆಯಾಗಬೇಕಿತ್ತು. ಆದರೆ, ವರುಣರಾಯ ಇದಕ್ಕೆ ಒಂದು ದಿನದ ಮಟ್ಟಿಗೆ ಬ್ರೇಕ್ ಹಾಕಿದ್ದಾನೆ. ನಿನ್ನೆಯ ಫೈನಲ್ ಪಂದ್ಯ ಮಳೆಗೆ ಆಹುತಿಯಾಗಿದ್ದು, ಮೀಸಲು ದಿನವಾದ ಇಂದು ನಡೆಯಲಿದೆ. ಈ ಮೂಲಕ ರೋಚಕ ಟೂರ್ನಿ ಸಮಾಪ್ತವಾಗಲಿದೆ. ಎರಡು ತಿಂಗಳ ಕಾಲ ನಡೆದ ಕ್ರಿಕೆಟ್ ಹಬ್ಬ ಹತ್ತು ಹಲವು ರಸದೌತಣಗಳನ್ನು ನೀಡಿದೆ.
ಟೂರ್ನಿಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ 'ಇಂಪ್ಯಾಕ್ಟ್ ಪ್ಲೇಯರ್' ಕೆಲ ಪಂದ್ಯಗಳಲ್ಲಿ ಇಂಪ್ಯಾಕ್ಟ್ ಮಾಡಿದರೆ, ಹಲವರು ಠುಸ್ ಆದರು. ಸೋತೇ ಬಿಟ್ಟಿತು ಎಂಬ ತಂಡ ಕೊನೆಯಲ್ಲಿ ಪುಟಿದೆದ್ದು ಗೆದ್ದು ಅಚ್ಚರಿ ಮೂಡಿಸಿವೆ. ಶುಭಮನ್ ಗಿಲ್ 3 ಶತಕ, ಕೊಹ್ಲಿ ಅತ್ಯಧಿಕ ಶತಕ, ಯಶಸ್ವಿ ಜೈಸ್ವಾಲ್ ಫಾಸ್ಟೆಸ್ಟ್ ಫಿಫ್ಟಿ, ಧೋನಿಯಿಂದ ಆಟೋಗ್ರಾಫ್ ಪಡೆದ ಹಿರಿಯ ಕ್ರಿಕೆಟಿಗ ಸುನೀಲ್ ಗವಾಸ್ಕರ್.. ಇವೆಲ್ಲಾ ಟೂರ್ನಿಯಲ್ಲಿ ಮೂಡಿಬಂದ ಅದ್ಭುತಗಳು.
ಸಿಎಸ್ಕೆ ಪರ ಆಡುತ್ತಿರುವ ತುಷಾರ್ ದೇಶಪಾಂಡೆ ಚೊಚ್ಚಲ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದರು. ಅಧಿಕ ರನ್ ನೀಡಿ ದುಬಾರಿಯಾಗಿ ಮೊದಲ ಪ್ರಯತ್ನವೇ ವಿಫಲವಾಯಿತು. ಸಿಎಸ್ಕೆ ಮತ್ತು ಲಖನೌ ಮಧ್ಯೆ ನಡೆದ ಪಂದ್ಯದಲ್ಲಿ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ದೋನಿ 2 ಸಿಕ್ಸರ್ ಸಿಡಿಸಿ ರಂಜಿಸಿದರು. ಕೆಕೆಆರ್ ಮತ್ತು ಆರ್ಸಿಬಿ ನಡುವಿನ ಪಂದ್ಯದಲ್ಲಿ ಸ್ಪಿನ್ನರ್ ಸುಯಾಶ್ ಶರ್ಮಾ ಚೊಚ್ಚಲ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚಿದರು.
ಅಜಿಂಕ್ಯಾ ರಹಾನೆ ಕಮ್ಬ್ಯಾಕ್:ಐಪಿಎಲ್ ಹಲವು ಆಟಗಾರರಿಗೆ 'ಜೀವದಾನ' ನೀಡಿದೆ ಎಂಬುದು ಮತ್ತೆ ಸಾಬೀತಾಯಿತು. ಭಾರತ ಟೆಸ್ಟ್ ತಂಡದ ಭಾಗವಾಗಿದ್ದ ಅಜಿಂಕ್ಯಾ ರಹಾನೆ ಕಳಪೆ ಆಟದಿಂದಾಗಿ ತಂಡದಿಂದ ಹೊರಬಿದ್ದಿದ್ದರು. ಸಿಎಸ್ಕೆ ಪರ ಆಡುವ ರಹಾನೆ ಮುಂಬೈ ಎದುರಿನ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ತನ್ನ ಬ್ಯಾಟಿಂಗ್ ಬಲ ಕುಂದಿಲ್ಲ ಎಂದು ತೋರಿಸಿದರು. ಇದಲ್ಲದೇ, ಟೆಸ್ಟ್ ವಿಶ್ವ ಚಾಂಪಿಯನ್ಶಿಪ್ ಫೈನಲ್ಗೆ ಆಯ್ಕೆ ಕೂಡ ಆಗಿದ್ದಾರೆ.
'ಸಿಕ್ಸರ್' ಸಿಂಗ್:ಕೆಕೆಆರ್ ತಂಡದ ರಿಂಕು ಸಿಂಗ್ ಬಲಿಷ್ಠ ಗುಜರಾತ್ ಟೈಟಾನ್ಸ್ನ ಯಶ್ ದಯಾಳ್ಗೆ ಕೊನೆಯ ಓವರ್ನಲ್ಲಿ ಸತತ 5 ಸಿಕ್ಸರ್ ಬಾರಿಸಿ ಸೋತಿದ್ದ ಪಂದ್ಯವನ್ನು ಗೆಲ್ಲಿಸಿಕೊಟ್ಟು ರಾತ್ರೋರಾತ್ರಿ ಹೀರೋ ಆದರು. ಇದಾದ ಬಳಿಕವೂ ಹಲವು ಪಂದ್ಯಗಳಲ್ಲಿ ರಿಂಕು ಮಿಂಚು ಹರಿಸಿದ್ದಾರೆ.
'ಆವೇಶ' ಖಾನ್:ಆರ್ಸಿಬಿಯ ವಿರಾಟ್ ಕೊಹ್ಲಿ ಮತ್ತು ಲಖನೌ ನಡುವೆ ತೀವ್ರ ತಿಕ್ಕಾಟಕ್ಕೆ ಟೂರ್ನಿ ಸಾಕ್ಷಿಯಾಯಿತು. ಆರ್ಸಿಬಿ ನೀಡಿದ್ದ 212 ರನ್ಗಳ ಬೃಹತ್ ಮೊತ್ತವನ್ನು ಲಖನೌ ಗೆದ್ದಾಗ ಆವೇಶ್ಖಾನ್ ಹೆಲ್ಮೆಟ್ ನೆಲಕ್ಕೆ ಬಿಸಾಡಿ ಸಂಭ್ರಮಾಚರಣೆ ಮಾಡಿದ್ದರು. ಇದಾದ ಬಳಿಕ ವಿರಾಟ್, ಗೌತಮ್ ಗಂಭೀರ್, ನವೀನ್ ಉಲ್ ಹಕ್ ಮಧ್ಯೆ ಮೈದಾನದಲ್ಲೇ ತೀವ್ರ ಕಿತ್ತಾಟ ನಡೆದಿತ್ತು. ಬಳಿಕ ವಿರಾಟ್ ಅಭಿಮಾನಿಗಳು ನವೀನ್ ಉಲ್ ಹಕ್ರನ್ನು ಹಲವು ಬಾರಿ ಕಿಚಾಯಿಸಿದ್ದೂ ಇದೆ.