ಮುಂಬೈ: ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಬಿಗ್ ಫೈಟ್ ನಡೆಯಲಿದೆ. ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡ ಅತ್ಯುತ್ತಮ ಫಾರ್ಮ್ ಕಂಡುಕೊಂಡಿದೆ. ಈ ವರ್ಷ ಈ ಎರಡು ತಂಡಗಳು ಮೊದಲ ಬಾರಿ ಮುಖಾಮುಖಿಯಾಗುತ್ತಿದ್ದು, ಮ್ಯಾಚ್ ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಈವರೆಗೂ ಆಡಿದ ನಾಲ್ಕು ಪಂದ್ಯಗಳನ್ನು ಜಯಿಸಿರುವ ಆರ್ಸಿಬಿ ಟೀಂ, ಅಭಿಮಾನಿಗಳಿಗೆ ಈ ಸಲ ಕಪ್ ನಮ್ದೆ ಎಂಬ ಸಂದೇಶ ನೀಡಿದೆ.
ಬ್ಯಾಟಿಂಗ್,ಬೌಲಿಂಗ್ ಬಲಾಬಲ
ತನ್ನ ಮೊದಲ ಪಂದ್ಯದಲ್ಲಿ ಸೋತಿದ್ದ ಚೆನ್ನೈ ತಂಡ ನಂತರ ಪುಟಿದೆದ್ದು ಮೇಲೆದ್ದು ‘ಹ್ಯಾಟ್ರಿಕ್‘ ಜಯದ ಮೂಲಕ ಟ್ರ್ಯಾಕ್ಗೆ ಮರಳಿದೆ. ಕಳೆದ ವರ್ಷ ಪ್ಲೇ ಆಫ್ ತಲುಪುವಲ್ಲಿಯೂ ವಿಫಲವಾಗಿದ್ದ ಚೆನ್ನೈ ಈ ಸಲ ಕಪ್ ಗೆಲ್ಲುವ ನಿಟ್ಟಿನಲ್ಲಿ ಹೋರಾಡುತ್ತಿದೆ. ಚೆನ್ನೈನ ತಂಡವು ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸದೃಢವಾಗಿದೆ. ಹಾಗಾಗಿ ಬಲಿಷ್ಠ ಆರ್ಸಿಬಿಗೆ ಫೈಟ್ ನೀಡುವ ಸಾಧ್ಯತೆ ಇದೆ. ಬ್ಯಾಟಿಂಗ್ ವಿಭಾಗದಲ್ಲಿ ರುತುರಾಜ್ ಗಾಯಕವಾಡ್ ಮತ್ತು ಫಾಫ್ ಡುಪ್ಲೆಸಿಸ್ ಉತ್ತಮ ಫಾರ್ಮ್ನಲ್ಲಿದ್ದು ಇವರಿಗೆ, ಮಧ್ಯಮ ಕ್ರಮಾಂಕದಲ್ಲಿ ಮೋಯಿನ್ ಅಲಿ, ರೈನಾ, ರಾಯುಡು ಉತ್ತಮ ಸಾಥ್ ನೀಡುತ್ತಿದ್ದಾರೆ. ಬಾಲಿಂಗ್ ವಿಭಾಗದಲ್ಲಿ ದೀಪಕ್ ಚಾಹರ್, ಲುಂಗಿ ಎಂಗಿಡಿ ಕೂಡಾ ಉತ್ತಮ ಫಾರ್ಮ್ನಲ್ಲಿದ್ದಾರೆ.
ಆರ್ಸಿಬಿ ಕೂಡ ಕಮ್ಮಿಯೇನಿಲ್ಲ. ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ ಮುರಿಯದ ಮೊದಲ ವಿಕೆಟ್ ಜೊತೆಯಾಟದಲ್ಲಿ ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ 181 ರನ್ ಗಳಿಸಿದ್ದರು. ಅಂತಿಮವಾಗಿ ತಂಡವು 10 ವಿಕೆಟ್ಗಳಿಂದ ಗೆದ್ದಿತ್ತು. ದೇವದತ್ತ ಐಪಿಎಲ್ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ್ದರು. ಮೊದಲ ಮೂರು ಪಂದ್ಯಗಳಲ್ಲಿ ಎಬಿ ಡಿವಿಲಿಯರ್ಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರ ಬ್ಯಾಟಿಂಗ್ ರಂಗೇರಿತ್ತು. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕೈಲ್ ಜೆಮಿಸನ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.