ದಕ್ಷಿಣ ಆಫ್ರಿಕಾದ ಡುವಾನ್ ಜಾನ್ಸೆನ್ ಮತ್ತು ಮಾರ್ಕೊ ಜಾನ್ಸೆನ್ ಜೋಡಿಯು ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಕಾಣಿಸಿಕೊಂಡ ಮೊದಲ ಅವಳಿ ಸಹೋದರರಾಗಿದ್ದಾರೆ. ಲೀಗ್ನಲ್ಲಿ ಈವರೆಗೆ ಅಣ್ಣ-ತಮ್ಮಂದಿರು ಬಾಗವಹಿಸಿದ್ದರು. ಆದರೆ ಅವಳಿ ಸಹೋದರರು ಉದಾಹರಣೆ ಇರಲಿಲ್ಲ.
ಇಂದು (ಭಾನುವಾರ) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದಲ್ಲಿ ಡುವಾನ್ ಜಾನ್ಸೆನ್ ಮುಂಬೈ ತಂಡದಿಂದ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಡುವಾನ್ ತಮ್ಮ ಚೊಚ್ಚಲ ಪಂದ್ಯದಲ್ಲಿ ನಾಲ್ಕು ಓವರ್‌ಗಳನ್ನು ಮಾಡಿ 13.25 ರ ಎಕಾನಮಿ ದರದಲ್ಲಿ 1 ವಿಕೆಟ್ ಪಡೆದು 53 ರನ್ ಬಿಟ್ಟುಕೊಟ್ಟರು. ಈ ಮೂಲಕ ಇಂದಿನ ಪಂದ್ಯದ ದುಬಾರಿ ಬೌಲರ್ ಎನಿಸಿಕೊಂಡರು.
ಮಾರ್ಕೊ ಒಟ್ಟು 12 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಈ ವರ್ಷ ಸನ್ ರೈಸರ್ಸ್ ಹೈದರಾಬಾದ್ತಂಡ ಪ್ರತಿನಿಧಿಸುತ್ತಿದ್ದಾರೆ. ಇಲ್ಲಿಯವರೆಗೆ 28.62 ರ ಸರಾಸರಿಯಲ್ಲಿ 13 ವಿಕೆಟ್ ಮತ್ತು 8.27 ರ ಎಕಾನಮಿ ದರ ಹೊಂದಿದ್ದಾರೆ.
ಇದನ್ನೂ ಓದಿ:ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಸಚಿನ್ ಪುತ್ರ ಅರ್ಜುನ್: ದಾಖಲೆಗಳು ಹೀಗಿವೆ..
ಮಾರ್ಕೊ ಜಾನ್ಸೆನ್ ಪ್ರಸಕ್ತ ಆವೃತ್ತಿಯಲ್ಲಿ ಇಲ್ಲಿಯವರೆಗೆ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಎರಡು ಪಂದ್ಯ ಆಡಿದ್ದಾರೆ. ಎರಡೂ ಪಂದ್ಯಗಳಲ್ಲಿ ತಲಾ ಎರಡು ವಿಕೆಟ್ ಉರುಳಿಸಿದ್ದಾರೆ. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 2 ವಿಕೆಟ್ ಪಡೆದು 16 ರನ್ ಕೊಟ್ಟರೆ, ಕೆಕೆಆರ್ ವಿರುದ್ಧ 2 ವಿಕೆಟ್ ಪಡೆದು 37 ರನ್ ನೀಡಿದ್ದಾರೆ.
ಐಪಿಎಲ್ ಆಡಿದ 10ನೇ ಸಹೋದರ ಜೋಡಿ:ಈವರೆಗೆ ಹತ್ತು ಜೋಡಿ ಸಹೋದರರು ಐಪಿಎಲ್ ಆಡಿದ್ದಾರೆ. ಅವರೆಂದರೆ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ (ಭಾರತ), ಶಾನ್ ಮಾರ್ಷ್, ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ), ಮೈಕಲ್ ಹಸ್ಸಿ, ಡೇವಿಡ್ ಹಸ್ಸಿ (ಆಸ್ಟ್ರೇಲಿಯಾ), ಅಲ್ಬಿ ಮೊರ್ಕೆಲ್, ಮೊರ್ನೆ ಮೊರ್ಕೆಲ್ (ದಕ್ಷಿಣ ಆಫ್ರಿಕಾ), ಬ್ರೆಂಡನ್ ಮೆಕಲಮ್, ನಾಥನ್ ಮೆಕಲಮ್ (ನ್ಯೂಜಿಲೆಂಡ್), ಡ್ವೇನ್ ಬ್ರಾವೋ, ಡ್ಯಾರೆನ್ ಬ್ರಾವೋ (ವೆಸ್ಟ್ ಇಂಡೀಸ್), ಸಿದ್ದಾರ್ಥ್ ಕೌಲ್, ಉದಯ್ ಕೌಲ್ (ಭಾರತ), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ (ಭಾರತ), ಸ್ಯಾಮ್ ಕರ್ರಾನ್, ಟಾಮ್ ಕುರಾನ್ (ಇಂಗ್ಲೆಂಡ್) ಮತ್ತು ಮಾರ್ಕೊ ಜಾನ್ಸೆನ್, ಡುವಾನ್ ಜಾನ್ಸೆನ್ (ದಕ್ಷಿಣ ಆಫ್ರಿಕಾ).
ಇದನ್ನೂ ಓದಿ:ದೇಶೀಯ ಕ್ರಿಕೆಟ್ ಟೂರ್ನಿಗಳ ಬಹುಮಾನ ಮೊತ್ತ ಹೆಚ್ಚಳ: ರಣಜಿ ವಿಜೇತರಿಗೆ ಸಿಗಲಿದೆ ₹5 ಕೋಟಿ