ಲಕ್ನೋ (ಉತ್ತರ ಪ್ರದೇಶ):ಸನ್ ರೈಸರ್ಸ್ ಕೊಟ್ಟ ಸುಲಭ ಗುರಿಯನ್ನು ನಾಯಕ ಕೆಎಲ್ ರಾಹುಲ್ ಹಾಗೂ ಕೃನಾಲ್ ಪಾಂಡ್ಯ ಅರ್ಧಶತಕದ ಜೊತೆಯಾಟದಿಂದ ಪೂರೈಸಿದರು. 16 ಓವರ್ನಲ್ಲಿ 5 ವಿಕೆಟ್ ನಷ್ಟದಿಂದ ಲಕ್ನೋ ಸೂಪರ್ ಜೈಂಟ್ಸ್ ಗುರಿ ತಲುಪಿತು. ನಾಯಕ ಕೆಎಲ್ ರಾಹುಲ್ 35 ರನ್ ಗಳಿಸಿ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು.
ಎರಡು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಕೈಲ್ ಮೇಯರ್ಸ್ ಇಂದು 13 ರನ್ಗೆ ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೇ ಬಂದ ದೀಪಕ್ ಹೂಡಾ 7 ರನ್ ಗಳಿಸಿ ಔಟಾದರು. ನಂತರ ಬಡ್ತಿ ಪಡೆದು ಬಂದ ಕೃನಾಲ್ ಪಾಂಡ್ಯ ನಾಯಕ ರಾಹುಲ್ ಸೇರಿ 50 ರನ್ ಜೊತೆಯಾಟ ನೀಡಿದರು. ತಂಡದ ಗೆಲುವಿಗೆ 22 ರನ್ ಬಾಕಿ ಇದ್ದಾಗ ಉಮ್ರಾನ್ ಮಲಿಕ್ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ಪಾಂಡ್ಯ (34) ರನ್ಗೆ ಪೆವಿಲಿಯನ್ಗೆ ಮರಳಿದರು.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕೆಎಲ್ ರಾಹುಲ್ ತಮ್ಮ ಆಟವನ್ನು ನಿಧಾನಗತಿಯಲ್ಲಿ ಮುಂದುವರಿಸಿದರು. ಗೆಲುವಿಗೆ 8 ರನ್ ದೂರ ಇರುವಾಗ ರಾಹುಲ್ (35) ಆದಿಲ್ ರಶೀದ್ಗೆ ವಿಕೆಟ್ ಒಪ್ಪಿಸಿದರು. ರಾಹುಲ್ ಬೆನ್ನಲ್ಲೇ ಬಂದ ರೊಮಾರಿಯೋ ಶೆಫರ್ಡ್ ಶೂನ್ಯಕ್ಕೆ ವಿಕೆಟ್ ಕೊಟ್ಟರು. ಕೊನೆಯಲ್ಲಿ ಅಜೇಯರಾಗುಳಿದ ನಿಕೋಲಸ್ ಪೂರನ್ (10) ಮತ್ತು ಮಾರ್ಕಸ್ ಸ್ಟೊಯಿನಿಸ್ (11) ತಂಡ ಗೆಲ್ಲಿಸಿದರು. ಲಕ್ನೋ 121 ರನ್ ಗುರಿಯನ್ನು ಬೆವರಿಳಿಸಿ ಗೆದ್ದುಕೊಂಡಿತು.
ಸನ್ ರೈಸರ್ಸ್ ಪರ ಆದಿಲ್ ರಶೀದ್ 2, ಫಜಲ್ಹಕ್ ಫಾರೂಕಿ, ಭುವನೇಶ್ವರ್ ಮತ್ತು ಮಲಿಕ್ ತಲಾ ಒಂದು ವಿಕೆಟ್ ಪಡೆದರು.