ಲಖನೌ (ಉತ್ತರ ಪ್ರದೇಶ):ಲಖನೌ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ರನ್ಗಳಿಂದ ರೋಚಕ ಗೆಲುವು ಸಾಧಿಸಿದೆ. ನಿಧಾನಗತಿ ಪಿಚ್ನಲ್ಲಿ ರನ್ಗಳು ಕಲೆ ಹಾಕಲು ಎರಡೂ ತಂಡಗಳು ಪರದಾಡಿದವು. ಆದರೆ, ಅಲ್ಪ ಮೊತ್ತದ ಗುರಿ ನೀಡಿದ್ದರೂ, ಬಿಗಿ ಬೌಲಿಂಗ್ನಿಂದ ಆರ್ಸಿಬಿ ಜಯದ ಕೇಕೆ ಹಾಕಿತು.
ಇಲ್ಲಿನ ಏಕನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 126 ರನ್ ಮಾತ್ರ ಪೇರಿಸಿತ್ತು. 127 ರನ್ ಗುರಿ ಬೆನ್ನಟ್ಟಿದ ಕೆಎಲ್ ರಾಹುಲ್ ಪಡೆ ಇನ್ನೂ ಒಂದು ಬಾಲ್ ಬಾಕಿರುವಾಗಲೇ 108 ರನ್ ಕಲೆ ಹಾಕಿತು. ಈ ಮೂಲಕ ಫಾಫ್ ಡು ಪ್ಲೆಸಿಸ್ ಪಡೆ ಎದುರು ಲಖನೌ ಶರಣಾಯಿತು.
ಲಖನೌ ಆರಂಭದಿಂದಲೂ ವಿಕೆಟ್ಗಳನ್ನು ಕಳೆದುಕೊಳ್ಳುತ್ತಾ ಆಘಾತ ಅನುಭವಿಸಿತು. ನಾಯಕ ರಾಹುಲ್ ಗಾಯದ ಕಾರಣದಿಂದ ಹೊರಗುಳಿದ ಕಾರಣ ಕೈಲ್ ಮೇಯರ್ಸ್ ಮತ್ತು ಆಯುಶ್ ಬದೋನಿ ಕ್ರೀಸ್ ಬಂದರು. ಆದರೆ, ಮೇಯರ್ಸ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕೃನಾಲ್ ಪಾಂಡ್ಯ (14) ಮತ್ತು ಆಯುಶ್ ಬದೋನಿ (4), ದೀಪಕ್ ಹೂಡಾ (1) ಹಾಗೂ ನಿಕೋಲಸ್ ಪೂರನ್ (9) ಸಹ ಬೇಗನೇ ಪೆವಿಲಿಯನ್ ಸೇರಿದರು. ಇದರಿಂದ ಲಖನೌ ತಂಡ 38 ರನ್ಗಳು ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು.
ನಂತರ ಮಾರ್ಕಸ್ ಸ್ಟೊಯಿನಿಸ್ (13), ಕೃಷ್ಣಪ್ಪ ಗೌತಮ್ (23) ಮತ್ತು ರವಿ ಬಿಷ್ಣೋಯ್ (5) ಕೂಡ ಹೆಚ್ಚಿನ ರನ್ ಸಿಡಿಸಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ನವೀನ್-ಉಲ್-ಹಕ್ (13), ಅಮಿತ್ ಮಿಶ್ರಾ (19) ರನ್ ಕಲೆ ಹಾಕಿದರು. ಆದರೆ, ಹೀಗಾಗಿ ಅಲ್ಪ ರನ್ ಗುರಿ ಮುಟ್ಟಲು ಸಾಧ್ಯವಾಗದೇ ಲಖನೌ ಸೋಲೊಪ್ಪಿಕೊಳ್ಳಬೇಕಾಯಿತು. ಆರ್ಸಿಬಿ ಪರ ಜೋಶ್ ಹ್ಯಾಜಲ್ವುಡ್, ಕರ್ಣ್ ಶರ್ಮಾ ತಲಾ 2 ವಿಕೆಟ್ ಪಡೆದರೆ, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು.