ಲಕ್ನೋ (ಉತ್ತರ ಪ್ರದೇಶ): ಬೆಂಗಳೂರಿನಲ್ಲಿ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೊನೆಯ ಒಂದು ವಿಕೆಟ್ನಿಂದ ಗೆದ್ದು ಆರ್‌ಸಿಬಿ ಅಭಿಮಾನಿಗಳ ಮುಂದೆ ಅತಿರೇಕದ ಸಂಭ್ರಮಾಚರಣೆ ಮಾಡಿತ್ತು. ಸೋಲಿನ ನಂತರವೂ ಸ್ಟೇಡಿಯಂನಲ್ಲಿ ಮೊಳಗುತ್ತಿದ್ದ ಆರ್‌ಸಿಬಿ ಎಂಬ ಕೂಗಿಗೆ ಗೌತಮ್ ಗಂಭೀರ್ 'ಮೌನವಾಗಿರಿ' ಎಂಬಂತೆ ಸನ್ನೆ ಮಾಡಿ ಅಭಿಮಾನಿಗಳನ್ನು ಕೆರಳಿಸಿದ್ದರು.
ಆರ್‌ಸಿಬಿ ಇಂದು ಲಕ್ನೋವನ್ನು ಎದುರಿಸುತ್ತಿದ್ದು, ಅವರ ತವರು ಮೈದಾನದಲ್ಲೇ ಸೋಲಿನ ಸೇಡು ತೀರಿಸಿಕೊಳ್ಳಲು ತವಕಿಸುತ್ತಿದೆ. ಅಂಕಪಟ್ಟಿಯಲ್ಲಿ ಸುಧಾರಿಸಿಕೊಳ್ಳಲು ಕೂಡಾ ಈ ಗೆಲುವು ಆರ್ಸಿಬಿಗೆ ಅತ್ಯಂತ ಮುಖ್ಯ. ಆರ್‌ಸಿಬಿ ಈವರೆಗೆ ಆಡಿದ 8 ಪಂದ್ಯದಲ್ಲಿ 4ನ್ನು ಗೆದ್ದು 8 ಅಂಕದಿಂದ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಲಕ್ನೋ ಎಂಟು ಪಂದ್ಯದಲ್ಲಿ ಐದರಲ್ಲಿ ಗೆದ್ದು 10 ಅಂಕದಿಂದ ಎರಡನೇ ಸ್ಥಾನದಲ್ಲಿದೆ. ಇಂದು ಆರ್ಸಿಬಿಯನ್ನು ಮಣಿಸಿದ್ದೇ ಆದಲ್ಲಿ ಅಗ್ರಸ್ಥಾನಕ್ಕೇರಲಿದೆ. ಈ ನಡುವೆ ಕಳೆದ ಕೆಲವು ದಿನಗಳಿಂದ ಲಕ್ನೋದಲ್ಲಿ ಮಳೆ ಸುರಿಯುತ್ತಿದ್ದು, ಇಂದಿನ ಪಂದ್ಯದ ಮೇಲೂ ಕಾರ್ಮೋಡ ಆವರಿಸಿದೆ.
ಪಂಜಾಬ್ ಕಿಂಗ್ಸ್ ವಿರುದ್ಧ ಐಪಿಎಲ್ನ ಎರಡನೇ ಅತಿ ಹೆಚ್ಚು 257 ರನ್ ಗಳಿಸಿದ ಲಕ್ನೋ ಇಂದು ಇನ್ನಷ್ಟು ಉತ್ಸಾಹದಿಂದ ಕಣಕ್ಕಿಳಿಯಲಿದೆ. ಪಂಜಾಬ್ ತಂಡವನ್ನು ಬೃಹತ್ ಅಂತರದಿಂದ ಮಣಿಸಿದ್ದರಿಂದ ಲಕ್ನೋ ರನ್ ರೇಟ್ ಸಹ ಉತ್ತಮವಾಗಿದೆ. ಸೂಪರ್ ಜೈಂಟ್ಸ್ನ ಎಲ್ಲ ಆಟಗಾರರು ಫಾರ್ಮ್ನಲ್ಲಿದ್ದು, ಎಲ್ಲ ಆಟಗಾರಿಂದ ಜೊತೆಯಾಟ ಬರುತ್ತಿರುವುದು ತಂಡದ ಬೃಹತ್ ಮೊತ್ತಕ್ಕೆ ಕಾರಣವಾಗಿದೆ. ಈ ಕಾರಣದಿಂದ ಫಾರ್ಮ್ನಲ್ಲಿರುವ ದಕ್ಷಿಣ ಆಫ್ರಿಕಾದ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರಿಗೆ ತಂಡದಲ್ಲಿ ಆಡಲು ಅವಕಾಶವೇ ಸಿಗುತ್ತಿಲ್ಲ.
ನಾಲ್ಕು ಆಟಗಾರರ ತಂಡವಾಗಿರುವ ಆರ್‌ಸಿಬಿ:ಆರ್‌ಸಿಬಿ ಮೂವರು ಬ್ಯಾಟರ್ ಮತ್ತು ಒಬ್ಬ ಬೌಲರ್ನ ತಂಡ ಎಂದು ಕರೆಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಸಿರಾಜ್ ಬಿಟ್ಟರೆ ಮತ್ತಾರು ಕೂಡಾ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಎಂಟು ಪಂದ್ಯಗಳಲ್ಲಿ ಈ ನಾಲ್ವರಿಂದ ಮಾತ್ರ ಕೊಡುಗೆ ತಂಡಕ್ಕೆ ಬಂದಿದೆ. ಮಧ್ಯಮ ಕ್ರಮಾಂಕದಲ್ಲಿ ಆರ್ಸಿಬಿಗೆ ಜೊತೆಯಾಟ ಮೂಡಿ ಬರುತ್ತಿಲ್ಲ. ಈ ಮೂವರ ವಿಕೆಟ್ ಪತನದ ನಂತರ ತಂಡ ವೇಗವಾಗಿ ವಿಕೆಟ್ ಕಳೆದುಕೊಳ್ಳುತ್ತಿದೆ.
ಜೋಶ್ ಹ್ಯಾಜಲ್‌ವುಡ್ ಫಿಟ್ ಆಗಿದ್ದಾರೆ ಎಂಬ ವರದಿಗಳಿದ್ದು ಇಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ವಿದೇಶಿ ಆಟಗಾರ ಆದ್ದರಿಂದ ಯಾರನ್ನು ಕೈಬಿಡುವುದು ಎಂಬ ಪ್ರಶ್ನೆ ಉದ್ಭವಿಸಲಿದೆ. ಸ್ಪಿನ್ ವಿಭಾಗದಲ್ಲಿ ಹಸರಂಗ ಉತ್ತಮವಾಗಿ ಕಾಣಿಸಿಕೊಳ್ಳುತ್ತಿದ್ದು, ಆಲ್ರೌಂಡರ್ ಸ್ಥಾನದಲ್ಲಿದ್ದಾರೆ. ಡೇವಿಡ್ ವಿಲ್ಲಿ ಅವರ ಬದಲಿಗೆ ಕಣಕ್ಕಿಳಿಸುವ ಸಾಧ್ಯತೆ ಇದೆ. ಫಾಫ್ ಪಕ್ಕೆಲುಬು ನೋವು ಗುಣವಾಗದಿದ್ದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ತಂಡಕ್ಕೆ ತೆಗೆದುಕೊಳ್ಳುವ ಆಯ್ಕೆಯೂ ಇದೆ.
ಆರ್‌ಸಿಬಿಯಲ್ಲಿ ಸುಯಶ್ ಪ್ರಭುದೇಸಾಯಿ ಜಾಗಕ್ಕೆ ಲೆಗ್ ಸ್ಪಿನ್ನರ್ ಕರಣ್ ಶರ್ಮಾ ಬರುವ ನಿರೀಕ್ಷೆ ಇದೆ. ಜೋಶ್ ಹ್ಯಾಜಲ್‌ವುಡ್ ಆರ್‌ಸಿಬಿಯಲ್ಲಿ ಕಾಣಿಸಿಕೊಳ್ಳುವುದನ್ನೂ ತಳ್ಳಿ ಹಾಕುವಂತಿಲ್ಲ. ಎಲ್ಎಸ್ಜಿಯಲ್ಲಿ ಮಾರ್ಕಸ್ ಸ್ಟೊಯ್ನಿಸ್ ಫಿಟ್ನೆಸ್ ಪರೀಕ್ಷೆಯ ಆಧಾರದಲ್ಲಿ ಕಣಕ್ಕಿಳಿಯಲಿದ್ದಾರೆ. ಅವರ ಬದಲಿಗೆ ಕ್ವಿಂಟನ್ ಡಿ ಕಾಕ್ಗೆ ಸ್ಥಾನ ಸಿಗುವ ಸಂಭವವಿದೆ.