ಲಕ್ನೋ (ಉತ್ತರ ಪ್ರದೇಶ):ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ 50 ರನ್ಗಳಿಂದ ಜಯ ದಾಖಲಿಸಿದೆ. 194 ರನ್ಗಳ ಗುರಿ ಬೆನ್ನಟ್ಟಿದ ದೆಹಲಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 143 ರನ್ ಗಳಿಸಲಷ್ಟೇ ಶಕ್ತವಾಯಿತು. ಲಕ್ನೋ ಪರ ಮಾರ್ಕ್ ವುಡ್ ಕೇವಲ 14 ರನ್ ನೀಡಿ 5 ವಿಕೆಟ್ ಪಡೆದರು.
ಬೃಹತ್ ಟಾರ್ಗೆಟ್ ಬೆನ್ನಟ್ಟಿದ ದೆಹಲಿ ಕ್ಯಾಪಿಟಲ್ಸ್ ತಂಡ ಕೊಂಚ ಉತ್ತಮ ಆರಂಭವನ್ನೇ ಪಡೆಯಿತು. ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ 4.2 ಓವರ್ಗಳಲ್ಲಿ 41 ರನ್ಗಳನ್ನು ಕಲೆ ಹಾಕಿದರು. ಆದರೆ, ನಂತರದ 7 ರನ್ಗಳ ಅಂತರದಲ್ಲಿ ಮಾರ್ಕ್ ವುಡ್ ಪ್ರಮುಖ ಮೂರು ವಿಕೆಟ್ಗಳನ್ನು ಕಿತ್ತು ದೆಹಲಿ ತಂಡಕ್ಕೆ ಶಾಕ್ ನೀಡಿದರು.
4 ಓವರ್ನ 3 ಮತ್ತು 4ನೇ ಎಸೆತದಲ್ಲಿ ಸತತ ಎರಡು ವಿಕೆಟ್ಗಳನ್ನು ಮಾರ್ಕ್ ವುಡ್ ಉರುಳಿಸಿದರು. 9 ಎಸೆತಗಳನ್ನು ಎದುರಿಸಿ ಎರಡು ಬೌಂಡರಿಗಳ ಸಮೇತ 12 ರನ್ ಬಾರಿಸಿದ್ದ ಪೃಥ್ವಿ ಅವರನ್ನು ಬೋಲ್ಡ್ ಮಾಡಿದರು. ಇದರ ಬೆನ್ನಲ್ಲೇ ಕ್ರೀಸ್ಗೆ ಬಂದ ಮಿಚೆಲ್ ಮಾರ್ಷ್ ಅವರ ವಿಕೆಟ್ ಕಿತ್ತಿ ಶೂನ್ಯಕ್ಕೆ ಪೆವಿಲಿಯನ್ ದಾರಿ ತೋರಿಸಿದರು. ನಂತರದಲ್ಲಿ 6 ಓವರ್ನ ಕೊನೆಯ ಎಸತೆದಲ್ಲಿ 4 ರನ್ ಗಳಿಸಿದ್ದ ಸರ್ಫಾರಾಜ್ ಖಾನ್ ಅವರ ವಿಕೆಟ್ ಕೂಡ ಮಾರ್ಕ್ ವುಡ್ ಪಡೆದರು. ಇದರಿಂದ 48 ರನ್ಗಳು ಆಗುವಷ್ಟರಲ್ಲಿ ಮೂರು ವಿಕೆಟ್ಗಳನ್ನು ಕಳೆದುಕೊಂಡು ದೆಹಲಿ ದಿಢೀರ್ ಕುಸಿಯಿತು.
ಮತ್ತೊಂದೆಡೆ, ತಮ್ಮ ಆಟ ಮುಂದುವರೆಸಿದ ಡೇವಿಡ್ ವಾರ್ನರ್ ಆಕರ್ಷಕ ಅರ್ಧಶತಕ ಬಾರಿಸಿದರು. ವಾರ್ನರ್ಗೆ ರಿಲೀ ರೋಸೌವ್ ಉತ್ತಮ ಸಾಥ್ ನೀಡಿದರು. 20 ಎಸತೆಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿದ ರೋಸೌವ್ 30 ರನ್ಗಳ ಕೊಡುಗೆ ನೀಡಿ ರವಿ ಬಿಷ್ಣೋಯಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರೋವ್ಮನ್ ಪೋವೆಲ್ (1) ಅವರನ್ನು ಬಿಷ್ಣೋಯಿ ಎಲ್ಬಿ ಬಲೆಗೆ ಕೆಡವಿದರು.