ಅಹಮದಾಬಾದ್: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವೇಗಿ ಲಾಕಿ ಫರ್ಗ್ಯೂಸನ್ ಮಿಂಚಿನ ಬೌಲಿಂಗ್ ದಾಳಿ ಕ್ರಿಕೆಟ್‌ಪ್ರಿಯರನ್ನು ಹುಬ್ಬೇರಿಸುವಂತೆ ಮಾಡಿದೆ.
ಹೈದರಾಬಾದ್ ತಂಡದ 22 ವರ್ಷದ ಬೌಲರ್ ಉಮ್ರಾನ್ ಮಲಿಕ್ ಟೂರ್ನಿಯುದ್ದಕ್ಕೂ 150 ಕಿ.ಮೀ.ಗಳ ಸರಾಸರಿ ವೇಗದಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡಿದ್ದರು. ಇವರು ಆಡಿದ 14 ಪಂದ್ಯಗಳಲ್ಲಿ 157 ಕಿ.ಮೀ ವೇಗವಾಗಿ ಚೆಂಡೆಸೆದು ವಿಶೇಷ ಸಾಧನೆ ಮಾಡಿದ್ದರು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲೇ 5 ವಿಕೆಟ್ ಪಡೆದ ಸಾಧನೆಯೊಂದಿಗೆ ಗಂಟೆಗೆ 157 ಕಿ.ಮೀ ವೇಗದಲ್ಲಿ ಬೌಲ್ ಮಾಡಿದ್ದು, ಐಪಿಎಲ್ ಇತಿಹಾಸದ ಅತಿ ವೇಗದ ಎಸೆತವಾಗಿತ್ತು. ಅಲ್ಲದೇ, ಐಪಿಎಲ್ 2022ರ ಅತಿ ವೇಗದ ಬೌಲರ್ ದಾಖಲೆಯಾಗಿತ್ತು. ಆದ್ರೆ ಈ ದಾಖಲೆಯನ್ನು ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಲಾಕಿ ಫರ್ಗ್ಯೂಸನ್ ಮುರಿದಿದ್ದಾರೆ.
ಇದನ್ನೂ ಓದಿ:ಕಪ್ ಗೆಲ್ಲಲು ನಾವಷ್ಟೇ ಕಷ್ಟಪಟ್ಟಿಲ್ಲ, ನೆಹ್ರಾ, ಕರ್ಸ್ಟನ್‌ರಿಂದ ಹಿಡಿದು ಎಲ್ಲರ ಶ್ರಮವಿದೆ: ಪಾಂಡ್ಯ
ಪ್ರಸಕ್ತ ಟೂರ್ನಿಯಲ್ಲಿ ಲಾಕಿ ಫರ್ಗ್ಯೂಸನ್ ಒಮ್ಮೆಯೂ ಕೂಡ ಗಂಟೆಗೆ 155 ಕಿ.ಮೀ. ವೇಗದಲ್ಲಿ ಚೆಂಡು ಎಸೆದಿರಲಿಲ್ಲ. ಆದರೆ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್ ಬ್ಯಾಟರ್ ಜೋಸ್ ಬಟ್ಲರ್ ಎದುರು ದಾಖಲೆ ವೇಗದ ಎಸೆತ ಎಸೆದು ಲಾಕಿ ಮಿಂಚಿದರು.
ಇನಿಂಗ್ಸ್‌ನ 5ನೇ ಓವರ್ನ ಕೊನೆಯ ಎಸೆತದಲ್ಲಿ ಬೌಲ್ ಮಾಡಿದ ಲಾಕಿ ಗಂಟೆಗೆ 157.3 ಕಿ.ಮೀ ವೇಗದಲ್ಲಿ ಚೆಂಡು ಎಸೆಯುವ ಮೂಲಕ ಉಮ್ರಾನ್ ಮಲಿಕ್ ಅವರ 157 ಕಿ.ಮೀ ವೇಗವನ್ನು ಮೀರಿಸಿದರು. ಈ ಮೂಲಕ ಈವರೆಗಿನ ಐಪಿಎಲ್ ಇತಿಹಾಸದಲ್ಲೇ ಎರಡನೇ ಅತ್ಯಧಿಕ ವೇಗದ ಬೌಲರ್ ಎನಿಸಿಕೊಂಡರು.
ಈ ಬಾರಿಯ ಐಪಿಎಲ್‌ನಲ್ಲಿ ಗಮನ ಸೆಳೆದ ಐವರು ವೇಗಿಗಳು: ಲಾಕಿ ಫರ್ಗ್ಯೂಸನ್ 157.3 ಕಿ.ಮೀ, ಸನ್‌ರೈಸರ್ಸ್ ಹೈದರಾಬಾದ್ ತಂಡದ ಉಮ್ರಾನ್ ಮಲಿಕ್ 157 ಕಿ.ಮೀ, ಡೆಲ್ಲಿ ಕ್ಯಾಪಿಟಲ್ಸ್‌ನ ಎನ್ರಿಕ್ ನಾಕಿಯಾ 152.6 ಕಿ.ಮೀ., ಗುಜರಾತ್ ಟೈಟಾನ್ಸ್‌ನ ಅಲ್ಝರಿ ಜೋಸೆಫ್ 151.8 ಕಿ.ಮೀ., ಲಖನೌ ಸೂಪರ್ಜೈಂಟ್ಸ್ನ ಮೊಹ್ಸಿನ್ ಖಾನ್ 151 ಕಿ.ಮೀ ವೇಗದಲ್ಲಿ ಬೌಲ್ ಮಾಡಿದ್ದಾರೆ.