ಮುಂಬೈ:ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ನೀಡಿದ ಸಾಧಾರಣ ರನ್ ಗುರಿ ಬೆನ್ನತ್ತಿದ್ದ ಪಂಜಾಬ್ ಕಿಂಗ್ಸ್ ತಂಡ ಆರಂಭದಲ್ಲೇ ಆಘಾತ ಎದುರಿಸಿತ್ತು. ಜಾನಿ ಬೈಸ್ಟ್ರೋವ್ 1ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದಿದ್ದರು. ಆದ್ರೆ ಓಪನರ್ ಶಿಖರ್ ಧವನ್ ಅಜೇಯ 62, ರಾಜಪಕ್ಸ 40 ರನ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಸ್ಫೋಟಕ 30 ರನ್‌ಗಳ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
16ನೇ ಓವರ್‌ನಲ್ಲಿ ಶಮಿ ಬೌಲಿಂಗ್‌ನಲ್ಲಿ ಲಿವಿಂಗ್‌ಸ್ಟೋನ್ ಹ್ಯಾಟ್ರಿಕ್ ಸಿಕ್ಸರ್ ಹೊಡೆಯುವ ಮೂಲಕ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಓವರ್‌ನ ಮೊದಲ ಎಸೆತದಲ್ಲಿ ಅವರು ಡೀಪ್ ಸ್ಕ್ವೈರ್ ಲೆಗ್ ಕಡೆಗೆ 117 ಮೀಟರ್ ದೂರ ಸಿಕ್ಸರ್ ಬಾರಿಸಿದರು. ಈ ಸಿಕ್ಸರ್ ಕಂಡು ಸ್ವತ: ಬೌಲರ್ ಶಮಿ, ರಶೀದ್ ಮತ್ತು ನಾಯಕ ಮಯಾಂಕ್ ಬೆಕ್ಕಸ ಬೆರಗಾದರು. ವಿಡಿಯೋ ನೋಡಿ..
ಈ ಸ್ಟ್ರೈಕ್ ಎಷ್ಟು ದೊಡ್ಡದಾಗಿತ್ತು ಎಂದರೆ, ಶಮಿ ಸಹ ತಮ್ಮ ಸಹ ಆಟಗಾರನನ್ನು ನೋಡಿ ನಗುತ್ತಿರುವುದನ್ನು ಕಾಣಬಹುದು. ಪಂಜಾಬ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ತಮ್ಮ ಸ್ಥಾನದಿಂದ ಜಿಗಿದು ಸಂಭ್ರಮಿಸಿದರು. ಪ್ರೇಕ್ಷಕರು ಸಹ ಹೌಹಾರಿದರು.
ಇನ್ನೊಂದೆಡೆ, ಇಂಗ್ಲೆಂಡ್ ತಂಡದ ಮಾಜಿ ನಾಯಕ ಪೀಟರ್ಸನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. 'ನಾನು ಇದುವರೆಗೆ ಇಂತಹದ್ದೊಂದು ಸಿಕ್ಸರ್ ನೋಡಿಯೇ ಇಲ್ಲ ಎಂದರು. ಕ್ರಿಸ್ ಗೇಲ್ ಆಗಾಗ್ಗೆ ಈ ರೀತಿ ಸಿಕ್ಸರ್ ಬಾರಿಸುವುದನ್ನು ನೋಡಿದ್ದೇನೆ. ಆದರೆ ಇದು ವಿಭಿನ್ನ ಎಂದು ಹೇಳುವ ಮೂಲಕ ಅನಿಲ್ ಕುಂಬ್ಳೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬಲಿಷ್ಠ ಗುಜರಾತ್ ವಿರುದ್ಧ ಗೆದ್ದ ಪಂಜಾಬ್.. ಪಾಯಿಂಟ್ ಪಟ್ಟಿಯಲ್ಲಿ ಆರ್ಸಿಬಿ ಹಿಂದಿಕ್ಕಿದ ಮಯಾಂಕ್ ಬಳಗ
'ಇದು ನಮಗೆ ದೊಡ್ಡ ಗೆಲುವು ಮತ್ತು ನಮಗೆ ಅದರ ಅಗತ್ಯವಿತ್ತು. ಕಳೆದೆರಡು ಪಂದ್ಯಗಳಲ್ಲಿ ನಾವು ಕಳಪೆ ಪ್ರದರ್ಶನ ತೋರಿದ್ದೇವೆ. ನಾನು ಮಯಾಂಕ್‌ನ ಬಳಿಗೆ ಹೋಗಿ ‘ನಾನು ನಿಮಗಿಂತ ಮೊದಲು ಬ್ಯಾಟ್ ಮಾಡಲು ಹೋಗುತ್ತೇನೆ ಎಂದೆ. ಆದ್ರೆ ಅವರು ಭಾನು ಔಟಾದ್ರೆ ನೀವು ಹೋಗಿ, ಶಿಖರ್ ಹೊರಬಂದರೆ ನಾನು ಒಳಗೆ ಹೋಗುತ್ತೇನೆ ಎಂದು ಹೇಳಿದರು. ನಮ್ಮ ಆಟದ ಬಗ್ಗೆ ನಮಗೆ ತಿಳಿದಿದೆ. ಮಯಾಂಕ್ ಇದ್ದರೆ ನಮಗೆ ಹೆಚ್ಚು ಸ್ಥಿರತೆ ಇರುತ್ತೆ. ಇದು ಕಲಿಕೆಯ ವಿಷಯವಾಗಿದೆ. ಹೊಸ ತಂಡವಾಗಿ ನಾವು ಬಯಸಿದ ರೀತಿಯಲ್ಲಿ ಆಡಲು ಹೋಗುವುದು ಕಷ್ಟ. ನಾವಿಂದು ಸ್ವಲ್ಪ ಚುರುಕಾಗಿ ಆಡಿದ್ದೇವೆ ಮತ್ತು ಅಂತಹ ಪಿಚ್‌ಗಳಲ್ಲಿ ನೀವು ಹಾಗೆಯೇ ಆಡಬೇಕು' ಎಂದು ಲಿವಿಂಗ್‌ಸ್ಟೋನ್ ಪಂದ್ಯದ ನಂತರ ಹೇಳಿದರು.
ಇಷ್ಟು ದೂರ ಸಿಕ್ಸರ್ ಬಾರಿಸುವ ಮೂಲಕ ಲಿವಿಂಗ್‌ಸ್ಟೋನ್ ಅವರು ಬೆನ್ ಕಟ್ಟಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಆದ್ರೆ 2013ರಲ್ಲಿ ಆರ್ಸಿಬಿ ಪರ ಬ್ಯಾಟ್ ಬೀಸಿದ್ದ ಕ್ರಿಸ್ ಗೇಲ್ 119 ಮೀಟರ್ ದೂರಕ್ಕೆ ಸಿಕ್ಸರ್ ಬಾರಿಸಿದ್ದು ಇದುವರೆಗಿನ ದೊಡ್ಡ ಐಪಿಎಲ್ ದಾಖಲೆಯಾಗಿ ಉಳಿದಿದೆ ಅನ್ನೋದು ಗಮನಾರ್ಹ!.