ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿ ಶೇಕಡಾ 75 ರಷ್ಟು ಮುಗಿದಿದ್ದು, ಮುಂದಿನ ಪಂದ್ಯಗಳು ಪ್ಲೇ ಆಫ್ ಕ್ವಾಲಿಫೈರ್ಗೆ ಕೆಳಗಿರುವ ತಂಡಗಳಿಗೆ ಪ್ರಮುಖವಾಗಲಿದೆ. ಪ್ರತೀ ಪಂದ್ಯವೂ ಮೇಲಿನ ನಾಲ್ಕು ಸ್ಥಾನದಲ್ಲಿ ಅವಕಾಶಕ್ಕಾಗಿ ನಡೆಯಲಿದೆ. ಇಂದಿನ ಕೋಲ್ಕತ್ತಾ ಮತ್ತು ಪಂಜಾಬ್ ಕಿಂಗ್ಸ್‌ನ ನಡುವಿನ ಫೈಟ್ ಸಹ ಇದೇ ರೀತಿಯಾಗಿದ್ದು, ಗೆದ್ದವರಿಗೆ ಪ್ಲೇ ಆಫ್ ಕನಸು ಮುಂದುವರೆಯಲಿದೆ. ಸೋತ ತಂಡ ಮಿಕ್ಕ ತಂಡಗಳ ಫಲಿತಾಂಶದ ಲಾಭದಲ್ಲಿ ತನ್ನ ಸ್ಥಾನದ ಉಳಿವನ್ನು ಎದುರು ನೋಡಬೇಕಾಗುತ್ತದೆ.
ಐಪಿಎಲ್ 2023ರ 53ನೇ ಪಂದ್ಯದಲ್ಲಿ ನಿತೀಶ್ ರಾಣಾ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಶಿಖರ್ ಧವನ್ ಮುಂದಾಳತ್ವದ ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ. ಕೋಲ್ಕತ್ತಾದ ತವರು ಮೈದಾನವಾದ ಈಡನ್ ಗಾರ್ಡನ್ಸ್ ಇಂದಿನ ಪಂದ್ಯ ನಡೆಯಲಿದ್ದು, ಸಂಜೆ 07:30ಕ್ಕೆ ಆರಂಭವಾಗಲಿದೆ. ಪಂಜಾಬ್ ಕಿಂಗ್ಸ್‌ಗೆ ಪ್ಲೇ ಆಫ್‌ಗೆ ಪ್ರವೇಶಿಸಲು ಇನ್ನೂ ಅವಕಾಶವಿದೆ. 10 ಪಂದ್ಯಗಳಲ್ಲಿ ಐದು ಗೆಲುವು ದಾಖಲಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ಎಂಟನೇ ಸ್ಥಾನಕ್ಕೆ ತಲುಪಿದೆ. ಈ ಗೆಲುವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಶ್ರೇಯಾಂಕ ಸುಧಾರಿಸುತ್ತದೆ, ಆದರೆ ಪ್ಲೇ-ಆಫ್‌ಗೆ ಹೋಗಲು ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದು ರನ್ ರೇಟ್ ಕೂಡ ಉತ್ತಮವಾಗಿಸಿಕೊಳ್ಳಬೇಕಾಗಿದೆ.
ಮುಂಬರುವ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವುದು ಪಂಜಾಬ್ ಕಿಂಗ್ಸ್‌ನ ಗುರಿಯಾಗಿದೆ. ಇಂದಿನ ಪಂದ್ಯ ಗೆದ್ದಲ್ಲಿ ಪಂಜಾಬ್ ಅಂಕಪಟ್ಟಿಯ ನಾಲ್ಕನೇ ಸ್ಥಾನಕ್ಕೆ ಏರಲಿದೆ. ಕಳೆದ ಪಂದ್ಯದಲ್ಲಿ ಲಿವಿಂಗ್ ಸ್ಟೋನ್ ಮತ್ತು ಜಿತೇಶ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್ ಸಹಾಯದಿಂದ 214 ರನ್ ಕಲೆಹಾಕಿದರೂ, ಬೌಲಿಂಗ್ನಲ್ಲಿ ಎಡವಿ ಮುಂಬೈ ವಿರುದ್ಧ 6 ವಿಕೆಟ್ಗಳ ಸೋಲನ್ನು ಪಂಜಾಬ್ ಕಂಡಿದೆ. ಇಂದು ಮತ್ತದೇ ಬ್ಯಾಟಿಂಗ್ ಪ್ರದರ್ಶನ ನೀಡಿ ಬೌಲಿಂಗ್ನಲ್ಲಿ ಸುಧಾರಿಸಿಕೊಳ್ಳಬೇಕಿದೆ.