ಕೋಲ್ಕತ್ತಾ (ಪಶ್ಚಿಮ ಬಂಗಾಳ): ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ ಮತ್ತು ಶಿವಂ ದುಬೆ ಅವರ ಅರ್ಧಶತಕದ ಭರ್ಜರಿ ಆಟದ ನೆರವಿನಿಂದ ಹಳದಿ ಪಡೆ ಕೆಕೆಆರ್ ವಿರುದ್ಧ ನಿಗದಿತ ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿದೆ. ನಿತೀಶ್ ರಾಣಾ ಇಳಿಸಿದ ಏಳು ಜನ ಬೌಲರ್ಗಳು ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟರ್ಗಳ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ. ಇದರಿಂದ ಕೆಕೆಆರ್ ಗೆಲುವಿಗೆ 236 ರನ್ಗಳ ಅಗತ್ಯವಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ಗೆ ಉತ್ತಮ ಆರಂಭವನ್ನು ಎಂದಿನಂತೆ ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೆ ಒದಗಿಸಿದರು. ಈ ಜೋಡಿ 7 ಓವರ್ಗೆ 73 ರನ್ ಜೊತೆಯಾಟ ಆಡಿತು. 20 ಬಾಲ್ನಲ್ಲಿ 3 ಸಿಕ್ಸ್ ಮತ್ತು 2 ಬೌಂಡರಿಯಿಂದ 35 ರನ್ ಗಳಿಸಿ ರುತುರಾಜ್ ಔಟ್ ಆದರು.
ನಂತರ ಬಂದ ಅಜಿಂಕ್ಯಾ ರಹಾನೆ ಕಾನ್ವೆ ಅವರೊಂದಿಗೆ ಜೊತೆಯಾಟ ಮುಂದುವರೆಸಿದರು. ತಂಡದ ಮೊತ್ತ 109 ಆಗಿದ್ದಾಗ 40 ಬಾಲ್ನಲ್ಲಿ 3 ಸಿಕ್ಸ್ ಮತ್ತು 4 ಬೌಂಡರಿಯಿಂದ 56 ರನ್ ಗಳಿಸಿದ್ದ ಕಾನ್ವೆ ಔಟ್ ಆದರು. ಆರ್ಸಿಬಿ ವಿರುದ್ಧ ಘರ್ಜಿಸಿದ್ದ ದುಬೆ ಮತ್ತೆ ತಮ್ಮ ಲಯವನ್ನು ಮುಂದುವರೆಸಿದರು. ರಹಾನೆ ಒಡಗೂಡಿ ತಂಡಕ್ಕೆ 80+ ರನ್ನ ಜೊತೆಯಾಟ ಮಾಡಿದರು.
ವೇಗದ ಅರ್ಧಶತಕ ಗಳಿಸಿದ ದುಬೆ:ಶಿವಂ ದುಬೆ ಕೇವಲ 20 ಬಾಲ್ನಲ್ಲಿ 50 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 5 ಸಿಕ್ಸ್ ಮತ್ತು 2 ಬೌಂಡರಿ ಇತ್ತು. ಚೆನ್ನೈ ಪರ ಅತಿ ವೇಗದ ಅರ್ಧಶತಕ ದಾಖಲಿಸಿದ 6ನೇ ಬ್ಯಾಟರ್ ಆದರು. ಪಟ್ಟಿಯಲ್ಲಿ ಧೋನಿ, ಅಂಬಟಿ ರಾಯುಡು ಜೊತೆ ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ರಹಾನೆ ಅರ್ಧಶತಕ:ಉತ್ತಮ ಲಯದಲ್ಲಿ ಕಂಡು ಬರುತ್ತಿರುವ ರಹಾನೆ ಚೆನ್ನೈಗೆ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗುತ್ತಿದ್ದಾರೆ. ಸತತ ಬ್ಯಾಟಿಂಗ್ನಲ್ಲಿ ರನ್ ಗಳಿಸುತ್ತಿರುವ ಅವರು ಐಪಿಎಲ್ನ 30ನೇ ಅರ್ಧಶತಕವನ್ನು ದಾಖಲಿಸಿ ಅಜೇಯರಾಗಿ ಉಳಿದರು. 29 ಬಾಲ್ಗಳನ್ನು ಆಡಿದ ರಹಾನೆ 5 ಸಿಕ್ಸ್ ಮತ್ತು 6 ಬೌಂಡರಿಯಿಂದ 71 ರನ್ ಗಳಿಸಿದರು.