ಮುಂಬೈ:ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿನ ಪಂದ್ಯದಲ್ಲಿ ಗಾಯಕ್ಕೆ ತುತ್ತಾದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಈ ಆವೃತ್ತಿಯ ಐಪಿಎಲ್ನಿಂದ ಸಂಪೂರ್ಣ ಹೊರಗುಳಿಯಲಿದ್ದಾರೆ. ಇದರ ಜೊತೆಗೆ ಜೂನ್ 7-11 ರವರೆಗೆ ಓವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಿಂದಲೂ ರಾಹುಲ್ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.
ಆರ್ಸಿಬಿ ಎದುರಿನ ಪಂದ್ಯದ ನಂತರ ಲಕ್ನೋ ಚೆನ್ನೈಯನ್ನು ಎದುರಿಸಿತ್ತು. ಆ ಪಂದ್ಯದ ನಾಯಕತ್ವವನ್ನು ಕೃನಾಲ್ ಪಾಂಡ್ಯಗೆ ವಹಿಸಿಕೊಡಲಾಗಿತ್ತು. ಈ ವೇಳೆ, ಬಿಸಿಸಿಐ ಅಧಿಕಾರಿಗಳು ಜಯದೇವ್ ಉನಾದ್ಕತ್ ಮತ್ತು ಕೆಎಲ್ ರಾಹುಲ್ ಚೆನ್ನೈ ಪಂದ್ಯದ ನಂತರ ಮುಂಬೈನಲ್ಲಿ ಸ್ಕ್ಯಾನಿಂಗ್ಗೆ ಒಳಗಾಗಲಿದ್ದಾರೆ. ನಂತರ ಅವರ ಸ್ಥಿತಿ ಆಧರಿಸಿ ಮುಂಬರುವ ಪಂದ್ಯಗಳಲ್ಲಿ ಭಾಗವಹಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದರು.
ಮಾಧ್ಯಮ ಒಂದರ ವರದಿಯ ಪ್ರಕಾರ ಕೆ ಎಲ್ ರಾಹುಲ್ ಮತ್ತು ಉನಾದ್ಕತ್ ಮುಂಬೈನಲ್ಲಿ ಸ್ಕ್ಯಾನ್ಗೆ ಒಳಪಡಿಸಲಾಗಿದೆ. ಅದರಂತೆ ರಾಹುಲ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಿಂದ ಹೊರಗುಳಿಯಲಿದ್ದಾರೆ. ಐಪಿಎಲ್ ಮುಗಿದ 9 ದಿನಗಳಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಡೆಯಲಿದ್ದು, ಬಿಸಿಸಿಐ ಪ್ರಕಟಿಸಿದ ತಂಡದಲ್ಲಿ ಕೆಎಲ್ ರಾಹುಲ್ ಅವರನ್ನು ಶ್ರೀಕರ್ ಭರತ್ ಬದಲಿ ವಿಕೆಟ್ ಕೀಪರ್ ಆಗಿ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿಲಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ನ ಮ್ಯಾನೇಜ್‌ಮೆಂಟ್ ಅಥವಾ ಬಿಸಿಸಿಐ ಯಾವುದೇ ಔಪಚಾರಿಕ ಹೇಳಿಕೆಯನ್ನು ನೀಡದ ಕಾರಣ ರಾಹುಲ್ ಅವರ ಗಾಯದ ಸ್ವರೂಪವು ಕೇವಲ ಊಹಾಪೋಹದ ವಿಷಯವಾಗಿದೆ. ಅವರು ಮಂಡಿರಜ್ಜು ಅಥವಾ ಸೊಂಟದ ಗಾಯದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೇವಲ 10 ತಿಂಗಳ ಹಿಂದೆ, ರಾಹುಲ್ ಅವರು ಜರ್ಮನಿಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಅವರ ಮುಂದಿನ ಆಟದ ಬಗ್ಗೆ ಈ ಅಂಶಗಳನ್ನು ಗಮನಕ್ಕೆ ತೆಗೆದು ಕೊಂಡು ಅವರ ಫಿಟ್ನೆಸ್ ಬಗ್ಗೆ ಹೇಳಲಾಗುತ್ತದೆ ಎಂದು ವರದಿಯಾಗಿದೆ.