ಲಕ್ನೋ (ಉತ್ತರ ಪ್ರದೇಶ): ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಶನಿವಾರ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ನಾಯಕ ಕೆಎಲ್ ರಾಹುಲ್ ಅವರ 68 (61) ರನ್ ತಂಡದ ಗೆಲುವಿಗೆ ಕೊಡುಗೆಯಾಗಲಿಲ್ಲ. ಆದರೆ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಆರಂಭಿಕರಾಗಿ ಮೂರನೇ ಅತಿ ಹೆಚ್ಚು 50 ಪ್ಲಸ್ ರನ್ ಸ್ಕೋರರ್ ಆದರು.
ಕೆಎಲ್ ರಾಹುಲ್ ಐಪಿಎಲ್‌ನಲ್ಲಿ 35 ಬಾರಿ ಆರಂಭಿಕರಾಗಿ 50 ಪ್ಲಸ್ ಸ್ಕೋರ್ ಗಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಪ್ರಸ್ತುತ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಅವರು ಆರಂಭಿಕರಾಗಿ 57 ಬಾರಿ 50 ಪ್ಲಸ್ ರನ್ ಗಳಿಸಿದ್ದಾರೆ. ಎರಡನೇ ಸ್ಥಾನವನ್ನು ಪಂಜಾಬ್ ಕಿಂಗ್ಸ್ನ ಶಿಖರ್ ಧವನ್ ಹೊಂದಿದ್ದಾರೆ. ಎಡಗೈ ಬ್ಯಾಟರ್ ಆರಂಭಿಕರಾಗಿ 48 ಬಾರಿ 50 ಪ್ಲಸ್ ರನ್ ಗಳಿಸಿದ್ದಾರೆ.
ರಾಹುಲ್‌ಗಿಂತ ಮೊದಲು ಭಾರತದ ಅನುಭವಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಮತ್ತು ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟರ್ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಜಂಟಿ ಸ್ಕೋರ್ ಗಳಿಸಿ ಮೂರನೇ ಸ್ಥಾನದಲ್ಲಿದ್ದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಲಾ 34 ಬಾರಿ ಆರಂಭಿಕರಾಗಿ 50 ಪ್ಲಸ್ ರನ್ ಗಳಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ 7,000 ರನ್:ಭಾರತ ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಬ್ಯಾಟರ್ ಕೆಎಲ್ ರಾಹುಲ್ ಶನಿವಾರ ಟಿ20 ಕ್ರಿಕೆಟ್‌ನಲ್ಲಿ 7,000 ರನ್ ಗಡಿ ತಲುಪಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟರ್ ಈ ಮೈಲಿಗಲ್ಲನ್ನು ಸಾಧಿಸಿದರು.
ಪಂದ್ಯದಲ್ಲಿ ಕೆಎಲ್ 61 ಎಸೆತಗಳಲ್ಲಿ 68 ರನ್ ಗಳಿಸಿದರು. ಅವರ ಇನ್ನಿಂಗ್ಸ್ ಎಂಟು ಬೌಂಡರಿಗಳನ್ನು ಒಳಗೊಂಡಿದ್ದು, 111.48 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದರು. 210 ಪಂದ್ಯದ 197 ಇನ್ನಿಂಗ್ಸ್‌ಗಳಲ್ಲಿ ಕೆಎಲ್ ರಾಹುಲ್ 42.49 ಸರಾಸರಿಯಲ್ಲಿ 7,054 ರನ್ ಗಳಿಸಿದ್ದಾರೆ. ಅವರು ಈ ಸ್ವರೂಪದಲ್ಲಿ ಆರು ಶತಕಗಳು ಮತ್ತು 61 ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ ಅಜೇಯ 132* ರನ್ ಆಗಿದೆ. ಟಿ20ಯಲ್ಲಿ ಅವರ ಸ್ಟ್ರೈಕ್ ರೇಟ್ 136.20 ಇದೆ.
ಭಾರತದ ಪರ 72 ಟಿ20 ಪಂದ್ಯಗಳಲ್ಲಿ ರಾಹುಲ್ 37.75ರ ಸರಾಸರಿಯಲ್ಲಿ 2,265 ರನ್ ಗಳಿಸಿದ್ದಾರೆ. ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಎರಡು ಶತಕಗಳನ್ನು ಮತ್ತು 22 ಅರ್ಧ ಶತಕಗಳನ್ನು ಹೊಂದಿದ್ದು, ಅವರ ಅತ್ಯುತ್ತಮ ಸ್ಕೋರ್ ಅಜೇಯ 110* ಆಗಿದೆ. ಅಂತಾರಾಷ್ಟ್ರೀಯ ಪಂದ್ಯದಲ್ಲಿ 139.12 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ), ಸನ್‌ರೈಸರ್ಸ್ ಹೈದರಾಬಾದ್ (ಎಸ್ಆರ್ಹೆಚ್), ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ಲಕ್ನೋ ಸೂಪರ್ ಜೈಂಟ್ಸ್(ಎಲ್‌ಎಸ್‌ಜಿ) ನ್ನು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಪ್ರಸ್ತುತ ಎಲ್ಎಸ್ಜಿಯ ನಾಯಕತ್ವ ವಹಿಸಿಕೊಂಡಿರುವ ಅವರು 47.17 ರ ಸರಾಸರಿ ಮತ್ತು 134.55 ರ ಸ್ಟ್ರೈಕ್ ರೇಟ್‌ನಲ್ಲಿ 4,151 ರನ್ ಗಳಿಸಿದ್ದಾರೆ. ಅವರು ಐಪಿಎಲ್‌ನಲ್ಲಿ ನಾಲ್ಕು ಶತಕಗಳು ಮತ್ತು 33 ಅರ್ಧ ಶತಕಗಳನ್ನು ಹೊಂದಿದ್ದು, ಅಜೇಯ 132* ಅವರ ಅತ್ಯುತ್ತಮ ಸ್ಕೋರ್ ಆಗಿದೆ.
ಕೇವಲ 197 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ ಅತಿ ವೇಗದ ಭಾರತೀಯ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ (212 ಇನ್ನಿಂಗ್ಸ್), ಶಿಖರ್ ಧವನ್ (246 ಇನ್ನಿಂಗ್ಸ್), ಸುರೇಶ್ ರೈನಾ (251 ಇನ್ನಿಂಗ್ಸ್) ಮತ್ತು ರೋಹಿತ್ ಶರ್ಮಾ (268 ಇನ್ನಿಂಗ್ಸ್) ಅವರ ಹಿಂದೆ ಇದ್ದಾರೆ.
ಇದನ್ನೂ ಓದಿ:MI vs PBKS: ಸ್ಯಾಮ್ ಕರ್ರಾನ್ ಅಬ್ಬರದ ಅರ್ಧಶತಕ, ಮುಂಬೈಗೆ 215 ರನ್ ಬೃಹತ್ ಗುರಿ