ಕೋಲ್ಕತ್ತಾ (ಪಶ್ಚಿಮ ಬಂಗಾಳ): ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಪಾದಾರ್ಪಣೆ ಮಾಡಿದ್ದ ಸುಯಾಶ್ ಶರ್ಮಾ ಎಂಬ 19 ವರ್ಷದ ಕ್ರಿಕೆಟ್ ಪ್ರತಿಭೆ ಪರಿಣಾಮಕಾರಿ ಬೌಲಿಂಗ್ ಮೂಲಕ ಮಿಂಚಿ ಎಲ್ಲರ ಗಮನ ಸೆಳೆದಿದ್ದರು. ಆರ್ಸಿಬಿಯನ್ನು 123 ರನ್ಗೆ ಕಟ್ಟಿಹಾಕುವಲ್ಲಿ ಈ ಯುವ ವೇಗಿಯ ಪಾಲುದಾರಿಕೆಯೂ ಹೆಚ್ಚಿತ್ತು. ಕೆಕೆಆರ್ ಕೋಚ್ ಚಂದ್ರಕಾಂತ್ ಪಂಡಿತ್ ಪ್ರಥಮ ಪಂದ್ಯದಲ್ಲೇ ಸುಯಶ್ ಶರ್ಮಾ ಬೌಲಿಂಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ವರುಣ್ ಚಕ್ರವರ್ತಿ ಮತ್ತು ಸುಯಶ್ ಶರ್ಮಾ ನೇತೃತ್ವದ ಕೆಕೆಆರ್ ಸ್ಪಿನ್ನರ್ಗಳ ಅಮೋಘ ಪ್ರದರ್ಶನದ ನೆರವಿನಿಂದ ಆತಿಥೇಯ ತಂಡ ಮೊದಲ ಗೆಲುವು ದಾಖಲಿಸಿದೆ. ರಾಣಾ ನಾಯಕತ್ವದಡಿ ತವರಿನಲ್ಲಿ ತಂಡಕ್ಕೆ ಸಿಕ್ಕ ಈ ಸೀಸನ್ನಿನ ಮೊದಲ ಗೆಲುವಿದು. ಆರ್ಸಿಬಿ 81 ರನ್ಗಳ ಹೀನಾಯ ಸೋಲು ಕಂಡಿತು.
ಸುಯಶ್ ಶರ್ಮಾ ಮೊದಲ ಪಂದ್ಯದಲ್ಲಿ 4 ಓವರ್ ಮಾಡಿ 30 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದರು. ಆರ್ಸಿಬಿ ಫಿನಿಶರ್ ಎಂದೇ ಕರೆಯಲ್ಪಡುವ ದಿನೇಶ್ ಕಾರ್ತಿಕ್, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಅನುಜ್ ರಾವತ್ ಹಾಗೂ ಬೌಲರ್ ಕರಣ್ ಶರ್ಮಾರ ವಿಕೆಟ್ನ್ನು ಇವರು ಪಡೆದರು.
"ಸುಯಶ್ ಅವರು ಟ್ರಯಲ್ ಪಂದ್ಯಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದನ್ನು ಕಂಡಿದ್ದೇನೆ. ಉತ್ತಮ ವೇಗವನ್ನು ಪಿಚ್ನಲ್ಲಿ ಅವರು ತೋರುತ್ತಾರೆ, ಅವರ ಬಾಲ್ಗೆ ಬ್ಯಾಟ್ ಇಡುವುದು ಕಷ್ಟ. ಆತನಿಗೆ ಅನುಭವದ ಕೊರತೆ ಇರಬಹುದು, ಆದರೆ ಹೋರಾಟದ ಮನೋಭಾವ ನಿನ್ನೆಯ ಪಂದ್ಯದಲ್ಲಿ ಕಂಡುಬಂತು" ಎಂದು ಕೋಚ್ ಚಂದ್ರಕಾಂತ್ ಪಂಡಿತ್ ಹೇಳಿದ್ದಾರೆ.