ನವದೆಹಲಿ:ಇಂಡಿಯಾನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಸೋತು ಆಘಾತ ಅನುಭವಿಸಿತ್ತು. ಆದರೆ, ಗುರುವಾರ ತವರು ನೆಲ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೇಲೆ ಸವಾರಿ ಮಾಡಿದ ರೈಡರ್ಸ್ ಗೆಲುವಿನ ಕೇಕೆ ಹಾಕಿದೆ. ಇದಕ್ಕೆ ಪ್ರಮುಖ ಕಾರಣದ ತಂಡದ ಆಟಗಾರರ ಅದ್ಭುತ ಪ್ರದರ್ಶನ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಕೋಲ್ಕತ್ತಾ ಮಿಂಚುವ ಮೂಲಕ ಭರ್ಜರಿ ಜಯ ದಾಖಲಿಸಿದೆ. ಇದರಲ್ಲೂ ಶಾರ್ದೂಲ್ ಠಾಕೂರ್ ತಮ್ಮ ಮಿಂಚಿನ ಆಟದ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಹೌದು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗದ ಬೌಲರ್ ಶಾರ್ದೂಲ್ ಠಾಕೂರ್ ನಿಧಾನವಾಗಿ ಆಲ್ರೌಂಡರ್ ಆಟಗಾರರಾಗಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇದನ್ನು ಆರ್ಸಿಬಿ ವಿರುದ್ಧ ಈಡನ್ ಗಾರ್ಡನ್ಸ್‌ನಲ್ಲಿ ಶಾರ್ದೂಲ್ ಠಾಕೂರ್ ತೋರಿದ ಅದ್ಭುತ ಪ್ರದರ್ಶನವೇ ನಿರೂಪಿಸುತ್ತದೆ. ಟಾಸ್ ಸೋತು ಮೊದಲ ಬ್ಯಾಟಿಂಗ್ಗೆ ಇಳಿದಿದ್ದ ಕೆಕೆಆರ್ ತಂಡ 89 ರನ್ಗಳಿಗೆ ಪ್ರಮುಖ ಐದು ವಿಕೆಟ್ಗಳು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ (57) ಹೊರತು ಪಡಿಸಿ ಉಳಿದ ನಾಲ್ವರು ಆಟಗಾರರು ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡಿದ್ದರು.
ಇದರ ನಡುವೆ ರಿಂಕು ಸಿಂಗ್ ಜೊತೆಗೂಡಿದ ಶಾರ್ದೂಲ್ ಠಾಕೂರ್ ಅಮೋಘವಾದ ಇನ್ನಿಂಗ್ಸ್ ಕಟ್ಟಿದರು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ವೇಗಿ ಶಾರ್ದೂಲ್ ಪರಿಣಾಮಕಾರಿ ಮತ್ತು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸುವ ಮೂಲಕ ಕೆಕೆಆರ್ ತಂಡಕ್ಕೆ ಆಸರೆಯಾದರು. ಅಲ್ಲದೇ, ತಂಡವು ಬೃಹತ್ ಮೊತ್ತ ಪ್ರೇರಿಸುವಲ್ಲೂ ನೆರವಾದರು. ಈಡನ್ ಗಾರ್ಡನ್ಸ್‌ನಲ್ಲಿ 29 ಬಾಲ್ಗಳಲ್ಲಿ 68 ರನ್ಗಳನ್ನು ಬಾರಿಸಿ ಮಿಂಚು ಹರಿಸಿದರು.