ಇಸ್ಲಾಮಾಬಾದ್(ಪಾಕಿಸ್ತಾನ):ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಮಿಂಚು ಹರಿಸುತ್ತಿರುವ ಜಮ್ಮು- ಕಾಶ್ಮೀರ ವೇಗದ ಬೌಲರ್ ಉಮ್ರಾನ್ ಮಲಿಕ್ ತಾವು ಆಡಿರುವ 11 ಪಂದ್ಯಗಳಿಂದ 15 ವಿಕೆಟ್ ಪಡೆದು ಮಿಂಚಿದ್ದಾರೆ. ಇದರ ಜೊತೆಗೆ ಐಪಿಎಲ್ ಇತಿಹಾಸದಲ್ಲೇ 157KMPH ವೇಗದಲ್ಲಿ ಬೌಲಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಇವರ ಬೌಲಿಂಗ್ ಶೈಲಿಗೆ ಅನೇಕ ದಿಗ್ಗಜರು ಅಚ್ಚರಿಯಾಗಿದ್ದಾರೆ.
ಇದೇ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಪ್ಲೇಯರ್ ಕಮ್ರಾನ್ ಅಕ್ಮಲ್ ಮಾತನಾಡಿದ್ದಾರೆ. ಒಂದು ವೇಳೆ, ಉಮ್ರಾನ್ ಮಲಿಕ್ ಪಾಕಿಸ್ತಾನದಲ್ಲಿದ್ದರೆ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದರು ಎಂದಿದ್ದಾರೆ. ವೇಗದ ಬೌಲರ್ಗಳಾದ ಶೋಯೆಬ್ ಅಖ್ತರ್ ಮತ್ತು ಬ್ರೆಟ್ ಲೀ ಜೊತೆ ಉಮ್ರಾನ್ ಮಲಿಕ್ ಹೋಲಿಕೆ ಮಾಡಿರುವ ಅಕ್ಮಲ್, ಆತ ಪಾಕಿಸ್ತಾನದಲ್ಲಿ ಇದ್ದಿದ್ದರೆ ಖಂಡಿತವಾಗಿ ನಮ್ಮ ಪರ ಆಡುತ್ತಿದ್ದ. ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಮಲಿಕ್ಗೆ ಆಡಲು ಅವಕಾಶ ನೀಡುವ ಮೂಲಕ ಭಾರತೀಯ ಕ್ರಿಕೆಟ್ ಮಂಡಳಿ ಸಾಕಷ್ಟು ಪ್ರಬುದ್ಧತೆ ತೋರಿಸಿದೆ ಎಂದಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಸೀಮಿತ ಓವರ್ಗಳ ಸರಣಿಗೆ ಉಮ್ರಾನ್ಗೆ ಅವಕಾಶ ಕೊಡಿ: ಗವಾಸ್ಕರ್
ಜಮ್ಮು-ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿಕೆಟ್ ಕೀಪರ್ ಬ್ಯಾಟರ್ ಅಕ್ಮಲ್, ಈ ವೇಗದ ಬೌಲರ್ ಪ್ರತಿ ಪಂದ್ಯದಲ್ಲೂ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ ಎಂದರು. ಇದೇ ವೇಳೆ, ಭಾರತೀಯ ಕ್ರಿಕೆಟ್ ತಂಡಕ್ಕೆ ಈ ಹಿಂದೆ ಗುಣಮಟ್ಟದ ಬೌಲರ್ಗಳ ಕೊರತೆಯಿತ್ತು. ಆದರೆ, ಇದೀಗ ಐಪಿಎಲ್ನಿಂದಾಗಿ ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಅವರಂತಹ ವೇಗಿಗಳು ಬೆಳಕಿಗೆ ಬಂದಿದ್ದಾರೆ ಎಂದರು.
ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಉಮ್ರಾನ್ ಮಲಿಕ್ ದಾಖಲೆಯ 157 KMPH ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ಮೂಲಕ ಈ ಹಿಂದಿನ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ತಾವು ಎಸೆದ 154 KMPH ದಾಖಲೆ ಬ್ರೇಕ್ ಮಾಡಿದ್ದರು. ಅತ್ಯದ್ಭುತ ಪ್ರದರ್ಶನ ನೀಡುತ್ತಿರುವ ಈ ಪ್ಲೇಯರ್ಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಸೀಮಿತ ಓವರ್ಗಳ ಸರಣಿಗೆ ಅವಕಾಶ ನೀಡುವಂತೆ ಸುನಿಲ್ ಗವಾಸ್ಕರ್ ಈಗಾಗಲೇ ಒತ್ತಾಯ ಮಾಡಿದ್ದಾರೆ.