ನವದೆಹಲಿ: ಸೋಮವಾರ ರಾತ್ರಿ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2023 ರ ಕಡಿಮೆ ಸ್ಕೋರ್ ಮುಖಾಮುಖಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 18 ರನ್ ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಿಂದ 126 ರನ್ ಕಲೆಹಾಕಿತ್ತು. ಪಂದ್ಯಕ್ಕೆ ಮಳೆ ಸ್ವಲ್ಪ ಸಮಯ ಅಡ್ಡಿಪಡಿಸಿತು. ನಾಯಕ ಫಾಫ್ ಡು ಪ್ಲೆಸಿಸ್ 44 ರನ್ ಗಳಿಸಿ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದರೆ, ಅವರ ಆರಂಭಿಕ ಜೊತೆಗಾರ ವಿರಾಟ್ ಕೊಹ್ಲಿ 31 ರನ್ ಕೊಡುಗೆ ನೀಡಿದರು. ಇವರಿಬ್ಬರು ಒಂಬತ್ತು ಓವರ್‌ಗಳಲ್ಲಿ 62 ರನ್ ಸೇರಿಸಿದರು.
ಕಡಿಮೆ ಸ್ಕೋರ್ನ್ನು ಬೆನ್ನು ಹತ್ತಲು ಕ್ರೀಸ್ಗೆ ಇಳಿದ ಲಕ್ನೋ ಬ್ಯಾಟರ್ಗಳಿಗೆ ಆರ್‌ಸಿಬಿ ಬೌಲ್ನಲ್ಲಿ ಭರ್ಜರಿ ದಾಳಿ ನಡೆಸಿತು. ಇದರಿಂದ ಎಲ್‌ಎಸ್‌ಜಿ 19.5 ಓವರ್‌ಗಳಲ್ಲಿ 108 ರನ್‌ಗಳಿಗೆ ಆಲೌಟ್ ಆಯಿತು. ಎಲ್‌ಎಸ್‌ಜಿ ನಾಯಕ ಕೆಎಲ್ ರಾಹುಲ್ ಫೀಲ್ಡಿಂಗ್ ಸಮಯದಲ್ಲಿ ಗಾಯಗೊಂಡರು ಮತ್ತು ಒಂಬತ್ತು ವಿಕೆಟ್‌ಗಳ ಪತನದ ನಂತರವೇ ಬ್ಯಾಟಿಂಗ್‌ಗೆ ಬಂದರು. ಕೊನೆಯ ವಿಕೆಟ್ ಅಗಿ ಬಂದ ಕೆಎಲ್ ರಾಹುಲ್ಗೆ ಪಂದ್ಯ ಗೆಲ್ಲಿಸಲು ಸಾಧ್ಯವಿರಲಿಲ್ಲ. ಸ್ಪಿನ್ನರ್ ಕರ್ಣ್ ಶರ್ಮಾ ಮತ್ತು ವೇಗಿ ಜೋಶ್ ಹ್ಯಾಜಲ್‌ವುಡ್ ಬೌಲಿಂಗ್ನಲ್ಲಿ ಕ್ರಮವಾಗಿ 2/20 ಮತ್ತು 2/15 ಗಳಿಸಿದರು.
ಪಂದ್ಯದ ಕೊನೆಯಲ್ಲಿ ಕೊಹ್ಲಿ ಮತ್ತು ಎಲ್‌ಎಸ್‌ಜಿ ತಂಡದ ಮೆಂಟರ್ ಆಗಿರುವ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ನಡುವೆ ಮಾತನ ಚಕಮಕಿ ನಡೆಯಿತು. ಈ ಬಗ್ಗೆ ಮಾತನಾಡಿದ ಅನಿಲ್ ಕುಂಬ್ಳೆ " ಪಂದ್ಯದ ವೇಳೆ ಬಹಳಷ್ಟು ವಿಚಾರಗಳು ನಡೆಯಬಹುದು, ಅದನ್ನು ನಮ್ಮೊಳಗೇ ಇಟ್ಟುಕೊಳ್ಳಬೇಕಾಗುತ್ತದೆ. ಭಾವನೆಗಳನ್ನು ಮೈದಾನದಲ್ಲಿ ಪ್ರದರ್ಶಿಸುವುದು ಅಷ್ಟು ಸೂಕ್ತ ಎನಿಸುವುದಿಲ್ಲ. ಮುಖ್ಯವಾಗಿ ಸಂಭಾಷಣೆ ಮಾಡಿ ಎಲ್ಲವನ್ನೂ ತಿಳಿಗೊಳಿಸಿಕೊಳ್ಳಬೇಕು. ಸ್ವೀಕಾರಾರ್ಹವಲ್ಲದ ಸಂಗತಿಯನ್ನು ಕೈಬಿಡಬೇಕು" ಎಂದು ಕಿವಿಮಾತು ಹೇಳಿದ್ದಾರೆ.