ಬೆಂಗಳೂರು: ಐಪಿಎಲ್‌ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಆರ್‌ಸಿಬಿ ಹೊಸ ಋತುವಿನಲ್ಲಿ ಶುಭಾರಂಭ ಮಾಡಿದೆ. ಗೆಲುವಿನ ಸಂಭ್ರಮದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ವಿರಾಟ್ ಕೊಹ್ಲಿ, ಮುಂದಿನ ಪಂದ್ಯಗಳಲ್ಲೂ ತಂಡ ಇದೇ ವೇಗವನ್ನು ಕಾಯ್ದುಕೊಳ್ಳಲು ಗಮನಹರಿಸುತ್ತದೆ ಎಂದರು.
ಆರ್‌ಸಿಬಿ ಪರ ಭರ್ಜರಿ ಪ್ರದರ್ಶನ ತೋರಿರುವ ವಿರಾಟ್ (49 ಎಸೆತಗಳಲ್ಲಿ ಅಜೇಯ 82) ಮತ್ತು ನಾಯಕ ಫಾಫ್ ಡು ಪ್ಲೆಸಿಸ್ (43 ಎಸೆತಗಳಲ್ಲಿ 73) ಅರ್ಧ ಶತಕಗಳನ್ನು ಸಿಡಿಸುವ ಮೂಲಕ ತಂಡವು 16ನೇ ಆವೃತ್ತಿಯಲ್ಲಿ ಚೊಚ್ಚಲ ಟ್ರೋಫಿ ಗೆಲುವಿನ ನಿರೀಕ್ಷೆ ಹುಟ್ಟಿಸಿದೆ.
ಪಂದ್ಯದ ನಂತರ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, "ಇದು ಅದ್ಭುತ ಗೆಲುವು. ಪಂದ್ಯ ಆರಂಭಕ್ಕೂ ಮುನ್ನ ಅತ್ಯಂತ ವಿಶ್ವಾಸದಿಂದ ಕಣಕ್ಕಿಳಿದೆವು. ಇಂದಿನ ಆಟದ ಬಗ್ಗೆ ನನಗೆ ತುಂಬಾ ಸಂತಸವಿದೆ. ಮುಂಬೈ ಪರ 20ರ ಯುವಕ ತಿಲಕ್ ವರ್ಮಾ ಅದ್ಭುತ ಪ್ರದರ್ಶನ ತೋರಿದ್ದು, ತಂಡದ ಸ್ಕೋರ್ ಹೆಚ್ಚಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ" ಎಂದು ಯುವ ಆಟಗಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿ, "ಆರ್‌ಸಿಬಿ ತಂಡವು ಮುಂಬೈ ಮತ್ತು ಚೆನ್ನೈ ತಂಡಗಳು ಕಪ್ ಗೆದ್ದಿರುವುದಕ್ಕಿಂತಲೂ ಹೆಚ್ಚು ಬಾರಿ ಕ್ವಾಲಿಫೈರ್ ಹಂತ ತಲುಪಿದೆ. ಹೀಗಾಗಿ ನಮ್ಮ ತಂಡ ಸ್ಥಿರ ಪ್ರದರ್ಶನ ತೋರುತ್ತಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಈ ಬಾರಿ ಅತ್ಯುತ್ತಮ ತಂಡವಾಗಿ ಹೊರಹೊಮ್ಮಲು ಪ್ರಯತ್ನಿಸಿಬೇಕಿದೆ. ಹಾಗೆಯೇ ಇದೇ ವೇಗ ಕಾಯ್ದುಕೊಂಡು ಕಾರ್ಯ ವಿಧಾನ ರೂಪಿಸುತ್ತೇವೆ" ಎಂದು ತಿಳಿಸಿದರು.